ಬೀಜಾಡಿ ಸರ್ವೀಸ್ ರಸ್ತೆ ಕಾಮಗಾರಿ: ಅಧಿಕಾರಿಗಳಿಂದ ಸರ್ವೇ ಕಾರ್ಯ

ಕುಂದಾಪುರ: ಇಲ್ಲಿನ ಬೀಜಾಡಿ ಸರ್ವೀಸ್ ರಸ್ತೆ ಕಾಮಗಾರಿ ಶೀಘ್ರವೇ ಪ್ರಾರಂಭಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ ಬೆನ್ನಲ್ಲೇ ಸೋಮವಾರ ಸಂಜೆ ಕುಂದಾಪುರ ಸಹಾಯಕ ಆಯುಕ್ತ ಅರುಣಪ್ರಭಾ ನೇತೃತ್ವದಲ್ಲಿ ನವಯುಗ ಕಂಪೆನಿ ಅಧಿಕಾರಿಗಳು ಭೇಟಿ ನೀಡಿ ಸರ್ವೇ ಕಾರ್ಯ ನಡೆಸಿದರು.

ಎನ್‌ಎಚ್‌ಐನ ಯೋಜನಾ ನೀರ್ದೇಶಕ ಸ್ಯಾಮ್‌ಸಂಗ್ ವಿಜಯಕುಮಾರ್ ಮತ್ತು ನವಯುಗ ಚೀಫ್ ಪ್ರಾಜೆಕ್ಟ್ ಮ್ಯಾನೇಜರ್ ಶಂಕರರಾವ್, ಇಂಜಿನಿಯರ್ ರಾಘವೇಂದ್ರ ಮತ್ತಿತರರ ತಂಡ ಭೇಟಿ ನೀಡಿ ಬಾಕಿ ಉಳಿದ ಕಾಮಗಾರಿಗಳ ಬಗ್ಗೆ ಸರ್ವೆ ಕಾರ್ಯ ನಡೆಸಿ ಫೆ.೧೦ರಿಂದ ಬೀಜಾಡಿ ಸರ್ವೀಸ್ ರಸ್ತೆ ಕಾಮಗಾರಿ ನಡೆಸುತ್ತೇವೆಂದು ಭರವಸೆ ನೀಡಿದರು.

ಬೀಜಾಡಿ ಸರ್ವೀಸ್ ರಸ್ತೆ ಅರೆಬರೆ ಕಾಮಗಾರಿಯಿಂದ ಬೇಸತ್ತ ಸ್ಥಳೀಯರು ಎನ್‌ಎಚ್‌ಐನ ಯೋಜನಾ ನೀರ್ದೇಶಕರ ವಿರುದ್ದ ಹರಿಹಾಯ್ದರು. ಈ ವೇಳೆಯಲ್ಲಿ ಮಾತನಾಡಿದ ಬೀಜಾಡಿ ಸರ್ವೀಸ್ ರಸ್ತೆ ಹೋರಾಟ ಸಮಿತಿ ಮುಖಂಡ ನಾರಾಯಣ ಬಂಗೇರ ಬೀಜಾಡಿ, ೨೦೧೧ ರಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಇನ್ನೂ ಕಾಮಗಾರಿಗಳನ್ನು ಬಾಕಿ ಇಟ್ಟು ಗುತ್ತಿಗೆ ಕಂಪೆನಿ ಸಾರ್ವಜನಿಕರ ಜೀವದ ಮೇಲೆ ಚೆಲ್ಲಾಟವಾಡುತ್ತಿದೆ. ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆಕ್ರೋಶ ವ್ಯಕಪಡಿಸಿದರು.

ಫೆ.೧೧ಕ್ಕೆ ಪ್ರತಿಭಟನೆಯ ಎಚ್ಚರಿಕೆ:

ಪ್ರತೀ ಬಾರಿಯೂ ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಕಾಮಗಾರಿಯ ದಿನ ನಿಗಧಿಪಡಿಸಿ ಹೋಗುತ್ತಾರೆ. ಬಳಿಕ ಇತ್ತ  ತಲೆ ಹಾಕಿ ನೋಡುವುದಿಲ್ಲ. ಮತ್ತೆ ಮತ್ತೆ ಎಲ್ಲಾ ಅಧಿಕಾರಿಗಳ ಬಾಯಿಯಿಂದಲೂ ಇದೇ ಉತ್ತರ ಕೇಳಿ ಬೇಸತ್ತು ಹೋಗಿದ್ದೇವೆ. ಸಾರ್ವಜನಿಕರ ಕಷ್ಟಗಳಿಗೆ ಜನಪ್ರತಿನಿಧಿಗಳೂ ಸೇರಿದಂತೆ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೇವಲ ತೋರ್ಪಡಿಕೆಗಾಗಿ ಉತ್ತರ ನೀಡಿ ಹೋಗುತ್ತಾರೆ. ಫಲಿತಾಂಶ ಮಾತ್ರ ಶೂನ್ಯ. ನಮ್ಮ ಹೋರಾಟ ನಿಲ್ಲುವುದಿಲ್ಲ. ಗುತ್ತಿಗೆ ಕಂಪೆನಿ ಹೇಳಿದಂತೆ ಫೆ.೧೦ರಿಂದ ಕಾಮಗಾರಿ ಆರಂಭವಾಗದಿದ್ದಲ್ಲಿ ಫೆ.೧೧ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಪ್ರತಿಭಟನೆಗೆ ಜಿಲ್ಲಾಡಳಿತ ಪೂರ್ಣ ಬೆಂಬಲ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ವೈಲೆಟ್ ಬರೆಟ್ಟೊ, ಬೀಜಾಡಿ ಗ್ರಾಮ ಪಂಚಾಯತಿ ಸದಸ್ಯ ವಾದಿರಾಜ ಹೆಬ್ಬಾರ್, ಬೀಜಾಡಿ ಸರ್ವಿಸ್ ಸರ್ವೀಸ್ ರಸ್ತೆ ಹೋರಾಟ ಸಮಿತಿ ಮುಖಂಡ ರಾಜು ಬೆಟ್ಟಿನಮನೆ, ಅಣ್ಣಪ್ಪ ಬೆಟ್ಟಿನಮನೆ, ನಾರಾಯಣ ಭಂಡಾರಿ, ಅನಂತಕೃಷ್ಣ ಉಪಾಧ್ಯಾಯ, ರಾಜೇಶ್ ಕಾವೇರಿ, ಸತೀಶ ಶೆಟ್ಟಿ ವಕ್ವಾಡಿ, ಪತ್ರಕರ್ತ ಗಣೇಶ್ ಐಶ್ವರ್ಯ ಬೀಜಾಡಿ, ಬೀಜಾಡಿ ಮಿತ್ರ ಸಂಗಮ ಸಂಸ್ಥೆಯ ಅಧ್ಯಕ್ಷ ಬಿ.ಜಿ.ನಾಗರಾಜ ಬೀಜಾಡಿ, ಮೂಡುಗೋಪಾಡಿ ರಿಫಾಯಿ ಜುಮ್ಮ ಮಸೀದಿಯ ಪ್ರಧಾನ ಕಾರ್ಯದರ್ಶಿ ಬಿ.ಎಮ್,ನಾಸೀರ್, ಬೀಜಾಡಿ ರಿಕ್ಷಾ ಚಾಲಕರ ಸಂಘದ ಪ್ರಮುಖ ದಿನೇಶ್ ಹಲ್ತೂರು, ಉದ್ಯಮಿಗಳಾದ ಸುರೇಶ್ ಬೆಟ್ಟಿನ್, ಜಯಕರ ಶೆಟ್ಟಿ, ಮಹೇಶ್  ಮಟ್ಟಿ, ಕರುಣಾಕರ ಶೆಟ್ಟಿ ಕೆದೂರು, ಮಹೇಶ್ ಭಂಡಾರಿ, ಸುಭಾಷ್‌ಚಾಂದ್ ಮೊದಲಾದವರು ಇದ್ದರು.