ಬೀದಿ ನಾಯಿಗಳ ರಕ್ಷಣೆಗೆ ಸಾಕು ನಾಯಿಗೆ ಚಿರತೆ ಬಣ್ಣ! : ಚಿರತೆ ಎಂದು ನಂಬಿ ಓಡಿ ಹೋಗ್ತಿವೆ ಬೀದಿನಾಯಿಗಳು

ಕುಂದಾಪುರ: ಹಠಾತ್ ನೋಡಿದರೆ ಎದೆ ಝಲ್ ಅನಿಸುತ್ತದೆ. ಇದೇನಿದು ಮನೆಯಲ್ಲಿ ಚಿರತೆಯನ್ನು ಕಟ್ಟಿ ಸಾಕುತ್ತಿದ್ದಾರೆಯೇ ಎಂದು ಭಾಸವಾಗುತ್ತದೆ. ಹತ್ತಿರ ಹೋಗಿ ನೇರ ದೃಷ್ಟಿಯಿಟ್ಟು ನೋಡಿದರೆ ಇದು ಚಿರತೆಯಲ್ಲ ನಾಯಿ ಎನ್ನೋದು ತಿಳಿಯುತ್ತದೆ. ಊರು ನಾಯಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಮನೆ ಮಾಲೀಕರು ಬಣ್ಣ ಬಳಿದು ನಾಯಿಯನ್ನು ಚಿರತೆಯಾಗಿ ಬದಲಾಯಿಸಿದ್ದಾರೆ.
ಕಾಲ್ತೋಡು ಗ್ರಾಮ ಗುಂಡ್ವಾಣ ಆಚಾರ್‌ಬೆಟ್ಟು ನಾಗಪ್ಪ ಪೂಜಾರಿ ಹಾಗೂ ಹೋಮ ದಂಪತಿ ಅಳಿಯ ಸುಧಾಕರ ತಮ್ಮ ಸಾಕು ನಾಯಿಯನ್ನು ಚಿರತೆಯಾಗಿ ಬದಲಾಯಿಸಿದ್ದಾರೆ. ಯಾವತ್ತು ನಾಯಿ ಚಿರತೆಯಾಗಿ ಬದಲಾಯಿತೋ ಅಂದಿನಿಂದ ಮನೆಯ ಎರಡು ನಾಯಿಗಳಿಗೆ ಬೀದಿ ನಾಯಿಗಳ ಕಾಟ ತಪ್ಪಿದೆ. ಅಷ್ಟೇ ಅಲ್ಲದೇ ತೋಟಕ್ಕೆ ಬಂದ ಮಂಗಗಳು ಬಣ್ಣ ಬದಲಾಯಿಸಿದ ನಾಯಿಗಳನ್ನು ಕಂಡು ಚಿರತೆ ಎಂದು ತಿಳಿದು ಪರಾರಿಯಾಗುತ್ತಿವೆ. ನಾಯಿಗೆ ಪೇಟಿಂಗ್ ಮಾಡುವ ಮೂಲಕ ಬೇರೆ ನಾಯಿಗಳ ರಕ್ಷಣೆ ಜೊತೆ ತೋಟದ ರಕ್ಷಣೆಯ ಟೂ ಇನ್ ಒನ್ ಲಾಭ ಎಂಬಂತಿದೆ.

ಚಿರತೆಯಾಯ್ತು ನಾಯಿ:
ಊರ ತುತ್ತತುದಿ ಕಾಡಂಚಿನಲ್ಲಿ ಹೋಮ ಅವರ ಮನೆಯಿದ್ದು, ಸಾಕು ನಾಯಿಗಳು ಇವರಿಗೆ ಅನಿವಾರ್ಯ. ಎಷ್ಟು ನಾಯಿ ತಂದು ಸಾಕಿದರೂ ಬೇರೆ ಬೇರೆ ಕಡೆಯಿಂದ ಬರುವ ಬೀದಿನಾಯಿಗಳ ದಾಳಿಯಿಂದ ಗಾಯಗಳಾಗಿ ಸತ್ತು ಹೋಗುತ್ತಿತ್ತು. ನಾಯಿ ರಕ್ಷಣೆ ಹೇಗೆ ಎಂದು ಯೋಚಿಸುತ್ತಿರುವಾಗ ಹೊಳೆದ ಐಡಿಯಾ.. ಪೇಟಿಂಗ್.. ಬಿಳಿ ಹಾಗೂ ಕಂದು ಮಿಶ್ರಿತ ನಾಯಿಗೆ ಕಪ್ಪು ಬಣ್ಣದ ಮೂಲಕ ಚಿರತೆಗೆ ಬಣ್ಣ ಹಚ್ಚಲಾಗಿದೆ. ನೋಡಿದರೆ ಪಕ್ಕನೆ ನಾಯಿ ಅಂತ ತಿಳಿಯುವುದಿಲ್ಲ. ದೃಷ್ಟಿ ಹಾಯಿಸಿ ನೋಡಿದರೆ ನಾಯಿ ಎಂದು ತಿಳಿಯಬಹುದು. ಇನ್ನು ಬೇರೆ ಬೇರೆ ನಾಯಿಗಳು ಪೈಂಟಿಂಗ್ ನಾಯಿ ಕಂಡು ಚಿರತೆ ಎಂದು ಭಯಗೊಂಡು ಪರಾರಿಯಾಗುತ್ತಿರುವುದುರಿಂದ ಬೀದಿನಾಯಿಗಳ ರಕ್ಷಣೆ ಸಿಕ್ಕಂತಾಗಿದೆ. ತೋಟಕ್ಕೆ ಕಾಡು ಪ್ರಾಣಿಗಳ ಉಪಟಳಕ್ಕೂ ಮುಕ್ತಿ ಸಿಕ್ಕಿದೆ..