ಬೀಡಿ ಕಾರ್ಮಿಕರ ಮಾಹಿತಿ ನೋಂದಣಿ ಅಭಿಯಾನ

ಉಡುಪಿ, ಮೇ 22: ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ಬೀಡಿ ಕಾರ್ಮಿಕರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬೀಡಿ ಕಾರ್ಮಿಕರು ತಮ್ಮ ಗುರುತಿನ ಚೀಟಿ, ಬ್ಯಾಂಕ್ ಖಾತೆ ವಿವರ, ರೇಷನ್ ಕಾರ್ಡ್ ಹಾಗೂ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಜೊತೆ ಹತ್ತಿರದ ಬೀಡಿ ಕಾರ್ಮಿಕರ ಆಸ್ಪತ್ರೆಯಲ್ಲಿ ಮಾಹಿತಿ ನೋಂದಾಯಿಸಬೇಕಾಗಿ ಕಾರ್ಮಿಕ ಕಲ್ಯಾಣ ಆಯುಕ್ತ ಕೆ.ಶೇಖರ್ ತಿಳಿಸಿರುತ್ತಾರೆ.

ಈ ಪ್ರಕ್ರಿಯೆ ಕಳೆದ ವರ್ಷ ಪ್ರಾರಂಭವಾಗಿದ್ದು, ಈವರೆಗೆ ಕೇವಲ ಶೇ.30 ಬೀಡಿ ಕಾರ್ಮಿಕರು ತಮ್ಮ ಮಾಹಿತಿಯನ್ನು ನೋಂದಾಯಿಸಿರುತ್ತಾರೆ. ಹಾಗಾಗಿ ಉಳಿದ ಕಾರ್ಮಿಕರು ಕೂಡಲೇ ತಮಗೆ ಹತ್ತಿರದ ಬೀಡಿ ಕಾರ್ಮಿಕ  ಆಸ್ಪತ್ರೆಯಲ್ಲಿ ತಮ್ಮ ಹೆಸರು ಹಾಗೂ ಇತರ ಮಾಹಿತಿಯನ್ನು ನೋಂದಾಯಿಸಬೇಕು. ಕಾರ್ಮಿಕ ಇಲಾಖೆಯ ಯಾವುದೇ ಸೌಲಭ್ಯ ಪಡೆಯಲು ಮಾಹಿತಿ ನೋಂದಣಿ ಅವಶ್ಯಕವಾಗಿರುತ್ತದೆ. ಬೀಡಿ ಕಾರ್ಮಿಕರ ಆಸ್ಪತ್ರೆಗಳು ಕಾರ್ಕಳ, ಉಡುಪಿ, ಮೂಡಬಿದ್ರೆ, ಪಡೀಲ್, ಕೈಕಂಬ, ತುಂಬೆ, ದೇರಳಕಟ್ಟೆ, ಕಾಟಿಪಳ್ಳ, ಕಲ್ಲಡ್ಕ, ಪುತ್ತೂರು, ಉಪ್ಪಿನಂಗಡಿ ಹಾಗೂ ವಾಮನಪದವಿನಲ್ಲಿ ಕಾರ್ಯವೆಸಗುತ್ತಿದ್ದು, ಮಾಹಿತಿ ನೋಂದಣಿ ಅಭಿಯಾನವು ಜೂನ್ 15 ರ ವರೆಗೆ ಚಾಲನೆಯಲ್ಲಿರುತ್ತದೆ ಎಂದು ಕಾರ್ಮಿಕ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.