ಡಿ. 29 ರಿಂದ ಮಲ್ಪೆ ಬೀಚ್ ಉತ್ಸವ : ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಜಿಲ್ಲಾಡಳಿತ ಉಡುಪಿ, ಪ್ರವಾಸೋದ್ಯಮ ಇಲಾಖೆ, ನಗರಸಭೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ ನಿರ್ಮಿತಿ ಕೇಂದ್ರ, ಪಶುಪಾಲನ ಇಲಾಖೆ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಹಾಗೂ ಸ್ಥಳೀಯ ಭಜನಾ  ಮಂಡಳಿಗಳು ಉಡುಪಿ ಇವರ ಸಹಯೋಗದಲ್ಲಿ ಡಿಸೆಂಬರ್ 29 ರಿಂದ 31 ರ ವರೆಗೆ ಮಲ್ಪೆ ಬೀಚ್‍ನಲ್ಲಿ, ಮಲ್ಪೆ ಬೀಚ್ ಉತ್ಸವ- 2019 ನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.

ಅವರು ಶುಕ್ರವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಡಿಸೆಂಬರ್ 29 ರಂದು ಮಲ್ಪೆ ಬೀಚ್ ಉತ್ಸವ ಕಾರ್ಯಕ್ರಮ ಉದ್ಘಾಟಿಸಲಾಗುವುದು. ಸದರಿ ದಿನದಂದು ಮಕ್ಕಳಿಗಾಗಿ ಚಿತ್ರಕಲೆ ಸ್ಫರ್ಧೆ, ಪುರುಷರಿಗಾಗಿ ವಾಲಿಬಾಲ್ ಹಾಗೂ ಮಹಿಳೆಯರಿಗಾಗಿ ತ್ರೋಬಾಲ್ ಪಂದ್ಯಾಟ, ಮರಳು ಶಿಲ್ಪ, ಗಾಳಿಪಟ ಪ್ರದರ್ಶನ, ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆ, ಅಂಜಲಿ ವಿಲ್ಸನ್ ಡ್ಯಾನ್ಸ್ ಟ್ರೂಪ್, ಶಿರಸಿ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡುವ ಉದ್ಧೇಶದಿಂದಾಗಿ ಉಡುಪಿ ಜಿಲ್ಲೆಯ ಹೆಸರಾಂತ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಡಿಸೆಂಬರ್ 30 ರಂದು ಸಂಜೆ ಕರ್ನಾಟಕದ ವಿವಿಧ ಜಿಲ್ಲೆಯ ಕಲಾ ತಂಡಗಳಿಂದ ಜನಪದ ಜಾತ್ರೆ ಹಾಗೂ ಪುರುಷರಿಗಾಗಿ ಹೊನಲು ಬೆಳಕಿನ ಅವಿಭಜಿತ ಪ್ರೋ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿದ್ದು, ಡಿಸೆಂಬರ್ 31 ರಂದು ಕರಾವಳಿ ಕರ್ನಾಟಕದ ಹೆಸರಾಂತ ಕಲಾವಿದರಿಂದ ಸಂಗೀತ ರಸಮಂಜರಿ ಹಾಗೂ ನೃತ್ಯ ವೈವಿದ್ಯಮಯ ಕಾರ್ಯಕ್ರಮ ಹಾಗೂ ಅಂತರಾಷ್ಟ್ರೀಯ ಮಟ್ಟದ ಚಿತ್ರ ಕಲಾವಿದರಿಂದ ವರ್ಣ ವಸಂತ ಚಿತ್ರ ಪ್ರದರ್ಶನ ಕಾರ್ಯಕ್ರಮ ಮತ್ತು ಕೇರಳದ ಖ್ಯಾತ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಲಿದ್ದು, ಮಧ್ಯರಾತ್ರಿ 12 ಗಂಟೆಯಿಂದ 12.30 ರವರೆಗೆ ಸುಡುಮದ್ದು ಪ್ರದರ್ಶನ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗುವುದು ಎಂದರು.

ಜಿಲ್ಲೆಯ ಎಲ್ಲಾ ಬೀಚ್‍ಗಳನ್ನು ಬ್ಲೂಫ್ಲಾಗ್ ಮಾನ್ಯತೆ ಪಡೆಯುವ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನೆ ಇದ್ದು, ಈ ನಿಟ್ಟಿನಲ್ಲಿ ಸರ್ವೇ ಕಾರ್ಯಗಳನ್ನು ನಡೆಸಲಾಗಿದೆ ಎಂದ ಜಿಲ್ಲಾಧಿಕಾರಿ,  ಸೋಮೇಶ್ವರ ಬೀಚ್ ಹಾಗೂ ಮರವಂತೆ ಬೀಚ್‍ಗಳ ಅಭಿವೃದ್ದಿಗೆ ತಲಾ 5 ಕೋಟಿ ರೂ. ಮಂಜೂರಾಗಿದೆ ಹಾಗೂ ಜನವರಿಯಲ್ಲಿ ಕಾಪು ಲೈಟ್ ಉತ್ಸವ ಆಚರಿಸಲು ಸಿದ್ದತೆಗಳಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರತಿಕಾಗೋಷ್ಟಿಯಲ್ಲಿ ಉಡುಪಿ ನಗರಸಭೆ ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯಕ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಹಾಜರಿದ್ದರು.