ನಮ್ಮ ನಿಮ್ಮ ನಡುವೆಯೂ ಇಂತವರಿರಬಹುದು ಜಾಗ್ರತೆ!

-ಬಿ.ಸಂ.ಸುವರ್ಚಲಾ

ದೊಂದು ನಗರವೂ ಅಲ್ಲದ,ಒಂದು ಸಣ್ಣ ಪೇಟೆ. ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿದ್ದ ಅಲ್ಲಿ ಶ್ರೀಮಂತ ಕುಟುಂಬಗಳಿಗೇನು ಕೊರತೆಯಿರಲಿಲ್ಲ. ಹೊಳೆದಂಡೆಯಲ್ಲಿದ್ದ ಪ್ರಶಾಂತ ಊರದು. ಇಂತಹಾ ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಸಂಪ್ರದಾಯಸ್ಥ ಹುಡುಗಿ ಆಕೆ. ಅದೇ ಊರಿನ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ಕಲಿಯುತ್ತಿದ್ದಳು. ಓದು ಮಾತ್ರವಲ್ಲದೇ, ಆಟೋಟ, ಹಾಡು, ನೃತ್ಯ, ನಾಟಕಗಳಲ್ಲೂ ಆಕೆಯದು ಎತ್ತಿದ ಕೈ. ಆಗಷ್ಟೇ ಬೆಳೆಯುತ್ತಿದ್ದ ಹುಡುಗಿ, ಹರೆಯದ ಬದಲಾವಣೆಗಳಿಂದ ಮೈ ಕೈ ತುಂಬಿಕೊಂಡು ಸುಂದರವಾಗಿ ಕಾಣುತ್ತಿದ್ದುದಂತೂ ಹೌದು.

ಆತ ಆ ಶಾಲೆಯ ಕಲಾ ಶಿಕ್ಷಕ. ಕಲೆಯೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಶಿಕ್ಷಕನೂ ಆತನೇ ಆಗಿದ್ದ. ಮದುವೆಯಾಗಿ ಚಂದದ ಹೆಂಡತಿ, ಪುಟ್ಟ ಮಗಳಿದ್ದರೂ ಈತನ ಕಾಮುಕ ಕಣ್ಣು ಏಳನೇ ತರಗತಿಯ ನಿರ್ಮಲ ಮನಸ್ಸಿನ ಆ ಹುಡುಗಿಯ ಮೇಲೆ ಬಿತ್ತು. ಲೈಂಗಿಕತೆಯ ಕುರಿತು ಅರಿವೇ ಇರದ ಆ ಹುಡುಗಿಗೆ ಕದ್ದು ಮುಚ್ಚಿ ಯಾವ್ಯಾವುದೋ ಅಂಗಗಳನ್ನು ನೋಡುತ್ತಿದ್ದ ಈತನ ನೋಟಗಳು‌ ಮೊದಮೊದಲಿಗೆ ಅಸಹಜವೆನ್ನಿಸತೊಡಗಿದರೂ ಗುರುವಿನ ಮೇಲಿನ ಗೌರವದಿಂದ ನಿರ್ಲಕ್ಷಿಸಿದಳು.

ಕ್ರಮೇಣವಾಗಿ ಈತನ ಕೆಟ್ಟ ನಡತೆ ಇನ್ನಷ್ಟು ಸ್ವರೂಪ ಬದಲಿಸುತ್ತಾ ಹೋಯಿತು. ಸಮಯ ಸಾಧಿಸಿ ಈಕೆ ಒಬ್ಬಳೇ ಸ್ಟಾಫ್ ರೂಮಿಗೆ ಬರುವಂತೆ ಅನಿವಾರ್ಯ ಸನ್ನಿವೇಶ ಸೃಷ್ಟಿಸತೊಡಗಿದ. ನಿಧಾನವಾಗಿ ಆಕೆಯ ಎದೆ, ತೊಡೆ, ಸೊಂಟವನ್ನು ಮುಟ್ಟತೊಡಗಿದ. ಅಸಹಜತೆಯ ಅನುಭವದ ಕುರುಹು ಅರಿತ ಈಕೆ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅಸಹಾಯಕಳಾದಳು.

ಎಲ್ಲದರಲ್ಲೂ ತೊಡಗಿಕೊಂಡು ಚಟುವಟಿಕೆಯ ಬುಗ್ಗೆಯಾಗಿದ್ದ ಈಕೆ ಅನೇಕ ಬಾರಿ ಅನಿವಾರ್ಯವಾಗಿ ಆತನ ಕಾಮುಕತೆಗೆ ಬಲಿಯಾಗುತ್ತಿದ್ದಳು. ತಪ್ಪಿಸಿಕೊಳ್ಳುವ ದಾರಿ ತಿಳಿಯದಾದಾಗ ಆದಷ್ಟು ಮೌನವಹಿಸತೊಡಗಿದಳು. ಈಕೆಯ ಮೌನ ಆತನಿಗೆ ಇನ್ನಷ್ಟು ಇಂಬು ಕೊಟ್ಟಿತೇನೋ ಎಂಬಂತೆ ಹತ್ತನೇ ತರಗತಿ ಮುಗಿಯುವವರೆಗೂ ಈಕೆ ಆತನಿಂದ ದೈಹಿಕವಾಗಿಯೂ, ಮಾನಸಿಕವಾಗಿಯೂ ನೋವನ್ನನುಭವಿಸತೊಡಗಿದಳು.
ಆಕೆಯು ಸ್ವಭಾವತಃ ಮೃದು ಮನಸ್ಸಿನವಳು. ತನ್ನಲ್ಲಿನ ನೋವನ್ನು ಯಾರಿಗೂ ಹೇಳಲಾಗದೇ ಮುಚ್ಚಿಟ್ಟಳು, ಗುಟ್ಟೆಂಬಂತೆ ಬಚ್ಚಿಟ್ಟಳು. ಸದಾ ಖುಷಿಖುಷಿಯಾಗಿರುತ್ತಿದ್ದ ಮಗಳಲ್ಲಿ ಉಂಟಾದ ಬದಲಾವಣೆ ಪೋಷಕರಿಗೂ ವಯೋಸಹಜ ಎಂದೆನಿಸಿತೋ ಗೊತ್ತಿಲ್ಲ! ಅವರೂ ಇವಳ ಮನಸ್ಸನ್ನು ಅರಿಯದಾದರು.ಎಂದು ಯಾವುದೋ ಅಭ್ಯಾಸದ ನೆಪದಿಂದ ಹೆಂಡತಿ ಮನೆಯಲ್ಲಿಲ್ಲದ ಸಂದರ್ಭದಲ್ಲಿ, ಈಕೆಯೊಬ್ಬಳನ್ನೇ ಆತ ಮನೆಗೇ ಕರೆಸಿಕೊಂಡನೋ, ಅಸಭ್ಯತೆ ಮಿತಿಮೀರಿತೆಂದೆನಿಸಿತೋ ಈಕೆ ತನ್ನ ಸಾಮರ್ಥ್ಯಕ್ಕೂ ಮೀರಿದ ಪ್ರಯತ್ನದಿಂದ ಆತನ ವಿರುದ್ಧ ಸಿಡಿದೆದ್ದು ಓಡಿ ಮನೆ ತಲುಪಿದ್ದಾಳೆ. ಪ್ರಾಂಶುಪಾಲರಿಗೆ ಆಕೆ ಸೂಚ್ಯವಾಗಿ ದೂರು ನೀಡಿದ್ದರೂ ಆತನ ಮೇಲೆ ಯಾವುದೇ ಕ್ರಮ ಜರುಗಿಸದಿದ್ದೂ ವಿಪರ್ಯಾಸ.

ಇದು ಸುಮಾರು‌ ಹತ್ತು ಹನ್ನೆರಡು ವರ್ಷಗಳ ಹಿಂದಿನ ಕತೆ. ಇಂದಿನಷ್ಟು ಕಾನೂನುಗಳು ಅಂದು ಬಲವಾಗಿರಲಿಲ್ಲ ಮಾತ್ರವಲ್ಲದೇ ಇಂತಹಾ ಪ್ರಕರಣಗಳು ಮುಜುಗರದ ಕಾರಣದಿಂದ ಹೊರಗೆ ಬರುತ್ತಿರಲಿಲ್ಲ. ಆದರೆ ಇಂದೂ ಆಕೆಯಂತಹಾ ಅನೇಕ ಹುಡುಗಿ/ಹುಡುಗರು ಇಂತಹದೇ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ, ಆದರೆ ಹೆಚ್ಚಿನವು ಬೆಳಕಿಗೆ ಬರುತ್ತಿಲ್ಲ.

ನಾವೂ ನಮ್ಮ ಮಕ್ಕಳು ಶಾಲೆ/ ಕಾಲೇಜಿನಿಂದ ಬಂದಾಗಲೋ ಅಥವಾ ಇನ್ನೆಲ್ಲಿಗೋ ಹೋಗಿ ಬಂದಾಗ ಬೇಸರದಲ್ಲಿದ್ದರೆ, ವಿಮುಖರಾಗಿದ್ದರೆ ಏನೂ ಹೆಚ್ಚಿಗೆ ಮಾತಾಡಿಸದೇ ಅವರ ಪಾಡಿಗೆ ಅವರನ್ನು‌ ಬಿಟ್ಟಿದ್ದಿರಬಹುದು. ಆದರೆ ಒಂದಂತೂ ನೆನಪಿಡಲೇಬೇಕು. ಈ ಬದಲಾವಣೆಯ ವಯಸ್ಸಿನಲ್ಲಿ ನಮ್ಮ ಮಕ್ಕಳಿಗೆ ನಾವು‌ ಗೆಳೆಯರಾಗಿದ್ದು, ಅವರೆಲ್ಲಾ ಚಟುವಟಿಕೆಗಳನ್ನು, ಮನಸ್ಸನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅವರನ್ನು ಅರ್ಥಮಾಡಿಕೊಂಡು, ತಾಳ್ಮೆಯಿಂದ ವರ್ತಿಸಿ ಸೂಕ್ತ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸುವುದು ತುಂಬಾ ಮುಖ್ಯ.

( ಲೇಖಕಿ, ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯಲ್ಲಿ ಉಪನ್ಯಾಸಕಿ, ಆಪ್ತಸಮಾಲೋಚಕಿ)