ಹಬ್ಬದ ಸೀಸನ್ ನಲ್ಲಿ ಆನ್‌ಲೈನ್ ಶಾಪಿಂಗ್‌ ಮಾಡುವ ಮೊದಲು ಜಾಗೃತೆ: ಮೋಸ ಹೋಗ್ಬೇಡಿ, ಈ ಸಿಂಪಲ್ಸ್ ಟಿಪ್ಸ್ ಫಾಲೋ ಮಾಡಿದ್ರೆ ನಿಮಗೆ ವಂಚನೆ ಆಗೋಕೆ ಸಾಧ್ಯವೇ ಇಲ್ಲ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಬಟ್ಟೆ, ಚಿನ್ನಾಭರಣ, ಮೊಬೈಲ್, ಟಿವಿ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳು ಲಭ್ಯವಿವೆ. ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಇದು ಉತ್ತಮ ಅವಕಾಶವಾದರೂ, ನಕಲಿ ವೆಬ್‌ಸೈಟ್‌ಗಳು, ಹಣಕಾಸಿನ ವಂಚನೆ ಮತ್ತು ಅನಗತ್ಯ ಖರೀದಿಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

ಕೆಲವು ತಾಣಗಳು ದೊಡ್ಡ ರಿಯಾಯಿತಿಯ ಆಮಿಷ ಒಡ್ಡುವುದು, ಆತುರದಲ್ಲಿ ಖರೀದಿಸುವಂತೆ ಒತ್ತಡ ಹೇರುವುದು ಹಾಗೂ ಹೆಚ್ಚುವರಿ ಶುಲ್ಕ ವಿಧಿಸುವ ತಂತ್ರಗಳನ್ನು ಬಳಸುತ್ತವೆ. ಇಂತಹ ಮೋಸಗೊಳಿಸುವ ವಿನ್ಯಾಸಗಳನ್ನು ‘ಡಾರ್ಕ್ ಪ್ಯಾಟರ್ನ್ಸ್’ ಎಂದು ಕರೆಯಲಾಗುತ್ತದೆ.

ಆನ್‌ಲೈನ್ ದೀಪಾವಳಿ ಶಾಪಿಂಗ್ ಮಾಡುವಾಗ ಈ 10 ಸಲಹೆಗಳನ್ನು ಪಾಲಿಸಿ.

1. ರಿಯಾಯಿತಿಯನ್ನು ಪರಿಶೀಲಿಸಿ

‘ಶೇ. 70 ರಿಯಾಯಿತಿ’, ‘ಇಂದೇ ಕೊನೆಯ ದಿನ’ ಎಂಬ ಸಂದೇಶಗಳನ್ನು ನಂಬಿ ಆತುರದಲ್ಲಿ ಖರೀದಿಸಬೇಡಿ. ಬೇರೆ ತಾಣಗಳಲ್ಲಿನ ಬೆಲೆಗಳೊಂದಿಗೆ ಹೋಲಿಕೆ ಮಾಡಿ.

2. ನಕಲಿ ವೆಬ್‌ಸೈಟ್‌ಗಳಿಂದ ದೂರವಿರಿ

ಜಾಹೀರಾತು ಅಥವಾ ವಾಟ್ಸ್‌ಆ್ಯಪ್‌ನಲ್ಲಿ ಬಂದ ಲಿಂಕ್ ತೆರೆಯುವ ಮೊದಲು ವೆಬ್‌ಸೈಟ್ ವಿಳಾಸ ಪರಿಶೀಲಿಸಿ. ಮಾರಾಟಗಾರರ ಮಾಹಿತಿ ಮತ್ತು ಗ್ರಾಹಕರ ವಿಮರ್ಶೆಗಳನ್ನು ಗಮನಿಸಿ.

3. ಬಜೆಟ್ ನಿಗದಿಪಡಿಸಿ

ಖರೀದಿಗೆ ಎಷ್ಟು ಹಣ ಖರ್ಚು ಮಾಡಬಹುದು ಎಂಬುದನ್ನು ಮೊದಲೇ ನಿರ್ಧರಿಸಿ. ರಿಯಾಯಿತಿಯ ಆಮಿಷಕ್ಕೆ ಒಳಗಾಗಿ ಅನಗತ್ಯ ವಸ್ತುಗಳನ್ನು ಖರೀದಿಸಬೇಡಿ.

4. ಉತ್ಪನ್ನದ ಗುಣಮಟ್ಟ ಪರಿಶೀಲಿಸಿ

ಗ್ರಾಹಕರ ವಿಮರ್ಶೆ, ರೇಟಿಂಗ್, ಮಾರಾಟಗಾರರ ವಿಶ್ವಾಸಾರ್ಹತೆ, ವಾರಂಟಿ ಮತ್ತು ಉತ್ಪನ್ನದ ವಿವರಗಳನ್ನು ಪರಿಶೀಲಿಸಿ. ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ ಹೆಚ್ಚಿನ ಗಮನ ನೀಡಿ.

5. ರಿಟರ್ನ್ ಮತ್ತು ರಿಫಂಡ್ ನಿಯಮ ಓದಿ

ಉತ್ಪನ್ನವನ್ನು ಹಿಂದಿರುಗಿಸುವ ಅಥವಾ ಬದಲಾಯಿಸುವ ನಿಯಮಗಳನ್ನು ತಿಳಿದುಕೊಳ್ಳಿ. ಆರ್ಡರ್ ದೃಢೀಕರಣ ಮತ್ತು ಪಾವತಿ ರಸೀದಿಗಳನ್ನು ಉಳಿಸಿಕೊಳ್ಳಿ.

6. ಯುಪಿಐ ಪಿನ್, ಒಟಿಪಿ ಹಂಚಿಕೊಳ್ಳಬೇಡಿ

ಹಣ ಸ್ವೀಕರಿಸಲು ಯುಪಿಐ ಪಿನ್ ನಮೂದಿಸುವ ಅಗತ್ಯವಿಲ್ಲ. ಬ್ಯಾಂಕ್ ಒಟಿಪಿ, ಪಾಸ್‌ವರ್ಡ್ ಮತ್ತು ಕಾರ್ಡ್‌ನ ಗುಪ್ತ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

7. ಸುರಕ್ಷಿತ ಪಾವತಿ ವಿಧಾನ ಬಳಸಿ

ವಿಶ್ವಾಸಾರ್ಹ ತಾಣಗಳ ಅಧಿಕೃತ ಪಾವತಿ ವ್ಯವಸ್ಥೆಗಳನ್ನೇ ಬಳಸಿ. ಪಾವತಿ ಮಾಡುವ ಮೊದಲು ಸ್ವೀಕರಿಸುವವರ ವಿವರ ಮತ್ತು ಒಟ್ಟು ಮೊತ್ತ ಪರಿಶೀಲಿಸಿ.

8. ಹೆಚ್ಚುವರಿ ಶುಲ್ಕ ಗಮನಿಸಿ

ವಿತರಣಾ ಶುಲ್ಕ, ಪ್ಯಾಕಿಂಗ್ ವೆಚ್ಚ ಮತ್ತು ಅನಗತ್ಯ ಸೇವೆಗಳನ್ನು ಪರಿಶೀಲಿಸಿ. ಉಚಿತ ಸದಸ್ಯತ್ವದ ಹೆಸರಿನಲ್ಲಿ ಸ್ವಯಂಚಾಲಿತವಾಗಿ ಹಣ ಕಡಿತವಾಗುವ ಷರತ್ತುಗಳಿವೆಯೇ ಎಂದು ತಿಳಿದುಕೊಳ್ಳಿ.

9. ಖರೀದಿಯ ದಾಖಲೆ ಉಳಿಸಿಕೊಳ್ಳಿ

ಆರ್ಡರ್ ಸಂಖ್ಯೆ, ಪಾವತಿ ರಸೀದಿ ಮತ್ತು ವಿತರಣೆಯ ವಿವರಗಳನ್ನು ಸಂಗ್ರಹಿಸಿಡಿ. ಪಾರ್ಸೆಲ್ ಹಾನಿಗೊಂಡಿದ್ದರೆ ಚಿತ್ರ ಅಥವಾ ವೀಡಿಯೊ ತೆಗೆದುಕೊಳ್ಳಿ.

10. ಉಚಿತ ಉಡುಗೊರೆಯ ಆಮಿಷಕ್ಕೆ ಬಲಿಯಾಗಬೇಡಿ

ಬಹುಮಾನ ಅಥವಾ ಉಚಿತ ಮೊಬೈಲ್ ನೀಡುವುದಾಗಿ ಹೇಳಿ ಶುಲ್ಕ ಪಾವತಿಸುವಂತೆ ಕೇಳಿದರೆ ಎಚ್ಚರ ವಹಿಸಿ. ಅಪರಿಚಿತರಿಗೆ ಹಣ ವರ್ಗಾಯಿಸಬೇಡಿ.

ಆನ್‌ಲೈನ್ ವಂಚನೆಗೆ ಒಳಗಾದರೆ ಏನು ಮಾಡಬೇಕು?

  • 1930: ಸೈಬರ್ ಹಣಕಾಸು ವಂಚನೆಯಾದರೆ ತಕ್ಷಣ ಕರೆ ಮಾಡಿ.
  • ಸೈಬರ್ ದೂರು: cybercrime.gov.in ಮೂಲಕ ದೂರು ಸಲ್ಲಿಸಿ.
  • ಗ್ರಾಹಕ ದೂರು: ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915 ಅನ್ನು ಸಂಪರ್ಕಿಸಿ.
  • ವಹಿವಾಟಿನ ವಿವರಗಳು, ಸಂದೇಶಗಳು ಮತ್ತು ಪಾವತಿ ರಸೀದಿಗಳನ್ನು ಸಾಕ್ಷ್ಯವಾಗಿ ಉಳಿಸಿಕೊಳ್ಳಿ.