ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಮಾತಿನ ಚಕಮಕಿ ಪ್ರಕರಣ: ಪಂದ್ಯದ ಶುಲ್ಕದ 100% ದಂಡ ವಿಧಿಸಿದ ಬಿಸಿಸಿಐ

ಸೋಮವಾರ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಮತ್ತು ನವೀನ್-ಉಲ್-ಹಕ್ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ.

ಕೊಹ್ಲಿ, ಗಂಭೀರ್ ಅವರು ಲೆವೆಲ್ 2 ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ನಂತರ ಅವರ ಪಂದ್ಯದ ಶುಲ್ಕದ 100% ದಂಡವನ್ನು ವಿಧಿಸಲಾಯಿತು. ನವೀನ್-ಉಲ್-ಹಕ್ ಅವರ ಲೆವೆಲ್ 1 ಅಪರಾಧಕ್ಕಾಗಿ ತಮ್ಮ ಪಂದ್ಯದ ಶುಲ್ಕದ 50% ರಷ್ಟನ್ನು ಕಳೆದುಕೊಂಡರು. ಗಂಭೀರ್, ಕೊಹ್ಲಿ ಮತ್ತು ನವೀನ್ ತಮ್ಮ ತಪ್ಪನ್ನು ಒಪ್ಪಿಕೊಂಡರು ಮತ್ತು ನಿರ್ಬಂಧಗಳನ್ನು ಸ್ವೀಕರಿಸಿದರು.

ಋತುವಿನ ಮೊದಲ ಪಂದ್ಯದಲ್ಲಿ ಆರ್.ಸಿ.ಬಿ ಅನ್ನು ಸೋಲಿಸಿದ ನಂತರ ಎಲ್.ಎಸ್.ಜಿ ಯ ಮಾರ್ಗದರ್ಶಕ ಗಂಭೀರ್ ಅವರ ಅತ್ಯುತ್ಸಾಹ ಭರಿತ ಸಂಭ್ರಮಾಚರಣೆಯು ವಿರಾಟ್ ಕೋಹ್ಲಿಗೆ ಇರಿಸು ಮುರಿಸನ್ನುಂಟು ಮಾಡಿತ್ತು. ನಿನ್ನೆಯ ಪಂದ್ಯಾಟದಲ್ಲಿ ಆರ್.ಸಿ.ಬಿಯು ಎಲ್.ಸಿ.ಜಿ ಅನ್ನು ಸೋಲಿಸಿತ್ತು. ವಿರಾಟ್ ಕೋಹ್ಲಿಯೂ ಕೂಡಾ ಈ ಸಂದರ್ಭವನ್ನು ಬಳಸಿ ಎದುರಾಳಿ ತಂಡವನ್ನು ಅಣಕಿಸಿದ್ದರು. ಇದು ಕೊಹ್ಲಿ ಬಳಗ ಮತ್ತು ಗಂಭೀರ್ ಬಳಗದ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಗಿದೆ ಎನ್ನಲಾಗಿದೆ.

ಪಂದ್ಯ ಮುಗಿದ ಬಳಿಕ ಸಾಂಪ್ರದಾಯಿಕ ಹಸ್ತಲಾಘವ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಒಬ್ಬರಿಗೊಬ್ಬರು ತೀರ ಸನಿಹ ಬಂದು ವಾಗ್ವಾದ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದವು. ಇದೀಗ ಬಿಸಿಸಿಐ ಮೂವರು ಆಟಗಾರರ ಮೇಲೆ ಭಾರೀ ದಂಡವನ್ನು ವಿಧಿಸಿದೆ.