BBK12: ‘ಬಿಗ್‌ ಬಾಸ್‌ʼ 12’ರ ಕಿರೀಟ ಮುಡಿಗೇರಿಸಿಕೊಂಡ ಗಿಲ್ಲಿ ನಟ – ಕೋಟಿ ಕೋಟಿ ಕನ್ನಡಿಗರ ಕನಸು ನನಸು

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ -12 (Bigg Boss Kannada 12) ಆರಂಭವಾದ ದಿನದಿಂದ ಪ್ರತಿ ದಿನವೂ ತನ್ನ ವ್ಯಕ್ತಿತ್ವದಿಂದ ಕೋಟ್ಯಂತರ ವೀಕ್ಷಕರ ಮನಗೆದ್ದು, ಫಿನಾಲೆವರೆಗೂ ಗೆದ್ದೇ ಗೆಲ್ಲುತ್ತಾರೆ ಎನ್ನುವ ಅಪಾರವಾದ ಬೆಂಬಲವನ್ನು ಪಡೆದುಕೊಂಡು ಬಂದಿದ್ದ ಗಿಲ್ಲಿನಟ (Gilli Nata) ವೀಕ್ಷಕರ ಊಹೆಯಂತೆಯೇ ʼಬಿಗ್‌ ಬಾಸ್‌ ಟ್ರೋಫಿʼ ಗೆದ್ದುಕೊಂಡಿದ್ದಾರೆ.

ಗಿಲ್ಲಿ ಅವರ ಗೆಲುವನ್ನು ಇಡೀ ಕರುನಾಡಿನ ಜನರೇ ಹಬ್ಬದಂತೆ ಸಂಭ್ರಮಿಸಿದ್ದಾರೆ. ಗಿಲ್ಲಿಯೇ ಗೆಲ್ಲುತ್ತಾರೆ ಎನ್ನುವ ಕೋಟ್ಯಂತರ ಜನರ ಮಾತು, ಕನಸು ಈಗ ನನಸಾಗಿದೆ. ಗಿಲ್ಲಿ ಅವರು 37 ಕೋಟಿಗೂ ಅಧಿಕ ದಾಖಲೆಯ ಪ್ರಮಾಣದ ಮತವನ್ನು ಪಡೆದು ʼಬಿಗ್‌ ಬಾಸ್‌ ಸೀಸನ್‌ -12ʼ ಟ್ರೋಫಿ ಗೆದ್ದುಕೊಂಡಿದ್ದಾರೆ.

ಗಿಲ್ಲಿ ಗೆಲುವನ್ನು ಸಂಭ್ರಮಿಸಲು ಗಿಲ್ಲಿಯ ಅಭಿಮಾನಿಗಳು ʼಬಿಗ್‌ ಬಾಸ್‌ʼ ಮನೆಯ ಹೊರಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಹರ್ಷ ವ್ಯಕ್ತಪಡಿಸಿದ್ದಾರೆ. ಕುಣಿದು ಕುಪ್ಪಳಿಸಿದ್ದಾರೆ. ರನ್ನರ್‌ ಅಪ್‌ ಆಗಿ ಕರಾವಳಿಯ ಪ್ರತಿಭೆ ರಕ್ಷಿತಾ ಶೆಟ್ಟಿ ಮೂಡಿ ಬಂದಿದ್ದಾರೆ. ತನ್ನ ಆಟ, ಮಾತು, ಚುರುಕುತನ, ವ್ಯಕ್ತಿತ್ವದಿಂದಲೇ ಎಲ್ಲರ ಜತೆ ಬೆರತುಕೊಂಡು, ಕರುನಾಡಿಗರ ಮನಗೆದ್ದ ರಕ್ಷಿತಾ ಶೆಟ್ಟಿ ಅವರು ರನ್ನರ್‌ ಅಪ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಮೊದಲ ಶೋನಲ್ಲೇ ರಕ್ಷಿತಾ ಶೆಟ್ಟಿ ಅವರು ಫಿನಾಲೆಗೆ ಬಂದಿದ್ದಾರೆ. ಕರುನಾಡಿಗರ ಅಪರ ಬೆಂಬಲದಿಂದ ರಕ್ಷಿತಾ ಮಿಂಚಿದ್ದಾರೆ.

ವಿಜೇತರಿಗೆ ಸಿಗುವುದೇನು?:

ಬಿಗ್‌ ಬಾಸ್‌ ಗೆದ್ದ ಗಿಲ್ಲಿನಟ ಅವರಿಗೆ 50 ಲಕ್ಷ ರೂ. ನಗದು ಬಹುಮಾನ ಹಾಗೂ ಮಾರುತಿ ಕಂಪನಿಯ ಹೊಸ ಕಾರು ಸಿಕ್ಕಿದೆ.

ರಕ್ಷಿತಾ ಅವರಿಗೆ 25 ಲಕ್ಷ ನಗದು ಬಹುಮಾನ ಸಿಕ್ಕಿದೆ.

ನಿಮ್ಮೆಲ್ಲರ ಪ್ರೀತಿಯನ್ನು ನಾನು ಯಾವತ್ತೂ ಮರೆಯಲ್ಲ. ನಾನು ಹೇಗೆ ಇದ್ದೀನೋ ಹಾಗೆಯೇ ಇರುತ್ತೇನೆ ಎಂದು ಗಿಲ್ಲಿನಟ ವೇದಿಕೆಯಲ್ಲಿ ಹೇಳಿದ್ದಾರೆ. ಗಿಲ್ಲಿ ಅವರ ತಂದೆ – ತಾಯಿ ಅವರು ವೇದಿಕೆ ಮಾತನಾಡುತ್ತಾ ಭಾವುಕರಾಗಿದ್ದು, ನನ್ನ ಮಗನನ್ನು ನಿಮ್ಮ ಮಗವೆಂದು ಅಂದುಕೊಂಡು ಎಲ್ಲರೂ ಪ್ರೀತಿ ಕೊಟ್ಟಿದ್ದೀರಿ ಅದಕ್ಕೆ ಧನ್ಯವಾದವೆಂದು ಪೋಷಕರು ಹೇಳಿದ್ದಾರೆ.

ಕಿಚ್ಚನಿಂದ ಗಿಲ್ಲಿಗೆ 10 ಲಕ್ಷ ನಗದು ಬಹುಮಾನ.. ಇದು ಬಿಗ್‌ ಬಾಸ್ ಇತಿಹಾಸದಲ್ಲೇ ಮೊದಲು:‌

ಇನ್ನು ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕಿಚ್ಚ ಸುದೀಪ್‌ ಅವರು ಸ್ಪರ್ಧಿಯೊಬ್ಬರಿಗೆ ವೈಯಕ್ತಿಕವಾಗಿ ನಗದು ಬಹುಮಾನ ನೀಡಿದ್ದಾರೆ. ಗಿಲ್ಲಿ ನಟ ಅವರಿಗೆ ನನ್ನ ಕಡೆಯಿಂದ 10 ಲಕ್ಷ ರೂಪಾಯಿ ಎಂದು ಸುದೀಪ್‌ ಅವರು ಹೇಳಿದ್ದಾರೆ. ಇದನ್ನು ಕೇಳಿ ಗಿಲ್ಲಿ ಅವರು ಕಿಚ್ಚನ ಕಾಲಿಗೆ ಬಿದ್ದಿದ್ದಾರೆ. ಈ ರೀತಿ ಆಗಿರುವುದು ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲಾಗಿದೆ.

ಹೇಗಿತ್ತು ಗಿಲ್ಲಿ ಜರ್ನಿ..:

ಇಡೀ ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳು ಒಂದು ಕಡೆ, ಗಿಲ್ಲಿ ಒಂದು ಕಡೆ ಇದ್ದರು. ಗಿಲ್ಲಿ ಸುಮ್ಮನೇ ಕೂತಿದ್ರೂ ಕಂಟೆಂಟ್‌, ಮಾತನಾಡಿದ್ರೂ ಕಂಟೆಂಟ್..‌ ಹೀಗೆ ಗಿಲ್ಲಿಯ ಹವಾ ಬಿಗ್‌ ಬಾಸ್‌ ಮನೆಯಲ್ಲಿ ಜೋರಾಗಿತ್ತು.ತನ್ನ ತಮಾಷೆಯ ಮಾತು ಹಾಗೂ ಕಳಂಕ ಇಲ್ಲದ ವ್ಯಕ್ತಿತ್ವವೇ ಗಿಲ್ಲಿ ಗೆಲುವಿಗೆ ಪ್ರಮುಖ ಕಾರಣವೆಂದರೆ ತಪ್ಪಾಗದು. ಗಿಲ್ಲಿಯ ಯಾರ ಜತೆಯೂ ತಾವೇ ಮಾತನಾಡಿ ಜಗಳ ಹೋದವರಲ್ಲ. ತನ್ನನ್ನು ಟಾರ್ಗೆಟ್‌ ಮಾಡಿದವರಿಗೆ ಮಾತಿನ ಮೂಲಕವೇ ಟಾಂಗ್‌ ಕೊಟ್ಟು ಸೈ ಎನ್ನಿಸಿಕೊಂಡಿದ್ದರು.

ಆರಂಭದಲ್ಲಿ ಗಿಲ್ಲಿ ಅಶ್ವಿನಿ ಗೌಡ ಅವರ ಜತೆ ಸಾಕಷ್ಟು ಕಿರಿಕ್‌ ಮಾಡಿಕೊಂಡಿದ್ದರು. ಬಿಗ್‌ ಬಾಸ್‌ ಮನೆಯಲ್ಲಿ ಇಬ್ಬರು ಹಾವು – ಮುಂಗುಸಿಯಂತಿದ್ದರು. ಅಶ್ವಿನಿ ತನ್ನ ದೊಡ್ಡ ಧ್ವನಿಯಿಂದಲೇ ಗಿಲ್ಲಿಯನ್ನು ಕೆಣಕುತ್ತಿದ್ದರು. ಇತ್ತ ಗಿಲ್ಲಿ ತಮಾಷೆ ಮಾಡುತ್ತಲೇ ಅಶ್ವಿನಿ ಅವರ ಕಾಲೆಳೆದಿದ್ದರು. ಧ್ರುವಂತ್‌ ಅವರ ಜತೆನೂ ಗಿಲ್ಲಿ ಇದೇ ರೀತಿಯಾಗಿ ಇದ್ದರು.

ಟಾಸ್ಕ್‌ನಲ್ಲಿ ಸೋಲು, ವ್ಯಕ್ತಿತ್ವದಲ್ಲಿ ಗೆದ್ದ ಗಿಲ್ಲಿ..

ಗಿಲ್ಲಿ ಬಿಗ್‌ ಬಾಸ್‌ ಟ್ರೋಫಿ ಗೆಲ್ಲಬಹುದಾದ ಪ್ರಬಲ ಸ್ಪರ್ಧಿಯಲ್ಲಿ ಒಬ್ಬರಾಗಿದ್ದಾರೆ. ಕಾವ್ಯ ಜತೆಗಿನ ಸ್ನೇಹ, ರಘು, ರಕ್ಷಿತಾ ಜತೆಗಿನ ಆತ್ಮೀಯತೆ, ಅಶ್ವಿನಿ ಜತೆಗಿನ ಸ್ನೇಹ- ಗಲಾಟೆ.. ಹೀಗೆ ಈ ಎಲ್ಲ ವಿಚಾರದಿಂದ ಗಿಲ್ಲಿ ಗಮನ ಸೆಳೆದಿರುವುದು ಹೆಚ್ಚು.

ಗಿಲ್ಲಿ ಮನೆಯಲ್ಲಿ ಮೌನವಾಗಿದ್ದಕ್ಕಿಂತ, ಮಾತಿನಲ್ಲೇ ಲೀನವಾಗಿದ್ದೇ ಹೆಚ್ಚು. ಹಾಸ್ಯ ಗಿಲ್ಲಿಯ ವ್ಯಕ್ತಿತ್ವದ ಜತೆಯೇ ಬಂದಿದೆ. ಹಾಗಂತ ಗಿಲ್ಲಿ ಪ್ರತಿ ನಿತ್ಯ ಹಾಸ್ಯ ಮಾಡುತ್ತಲೇ ಇರಲಿಲ್ಲ. ನಾಮಿನೇಷನ್‌ ವಿಚಾರದಲ್ಲಿ ಪ್ರಬಲ ಕಾರಣಗಳನ್ನು ಕೊಟ್ಟು ಎದುರಾಳಿಯನ್ನು ಕಟ್ಟಿ ಹಾಕುವುದರಲ್ಲೂ ಗಿಲ್ಲಿ ಮುಂದಿದ್ದರು.

ಆದರೆ ಎಲ್ಲದರಲ್ಲೂ ಗೆದ್ದ ಗಿಲ್ಲಿ, ಟಾಸ್ಕ್‌ ವಿಚಾರದಲ್ಲಿ ಮಾತ್ರ ಅಷ್ಟಕಷ್ಟೇ ಆಗಿಯೇ ಉಳಿದಿದ್ದಾರೆ. ಇಡೀ ಸೀಸನ್‌ನಲ್ಲಿ ಹತ್ತಾರು ಟಾಸ್ಕ್‌ಗಳನ್ನು ಆಡಿದ್ದಾರೆ. ಆದರೆ ಗೆದ್ದಿರುವುದು ಮಾತ್ರ ಕೆಲವು ಮಾತ್ರ. ಈ ಒಂದು ವಿಚಾರದಲ್ಲಿ ಗಿಲ್ಲಿ ಹಿಂದೆ ಉಳಿದಿದ್ದರು.

ಕಾವ್ಯ ಜತೆಗಿನ ಸ್ನೇಹ..

ಗಿಲ್ಲಿ ನಟ ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯ ಶೈವ ಅವರ ಜತೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಗಿಲ್ಲಿ ಎಡವಿದಾಗ ಕಾವ್ಯ ಜತೆಯಾಗಿದದ್ದು ಕಾವ್ಯ ಅವರು. ಜಂಟಿಯಾಗಿದ್ದ ಗಿಲ್ಲಿ – ಕಾವ್ಯ ಅವರ ಸ್ನೇಹ, ಮುನಿಸು ಕರುನಾಡಿನ ಮನಗೆದ್ದುಕೊಂಡಿತು. ಎಲ್ಲಿಯವರೆಗೆ ಅಂದರೆ ಸೋಶಿಯಲ್‌ ಮೀಡಿಯಾದಲ್ಲಿ ಕಾವ್ಯ – ಗಿಲ್ಲಿಗೆ ದೊಡ್ಡಮಟ್ಟದ ಬೆಂಬಲ ವ್ಯಕ್ತವಾಗಿತ್ತು. ಗಿಲ್ಲಿಯ ವ್ಯಕ್ತಿತ್ವ ತಿದ್ದುವಲ್ಲಿ ಕಾವ್ಯ ಅವರ ಕೊಡುಗೆಯೂ ದೊಡ್ಡಮಟ್ಟದಲ್ಲಿ ಇತ್ತು ಎಂದರೆ ತಪ್ಪಾಗದು. ಒಂದು ಹಂತದಲ್ಲಿ ಕಾವ್ಯ ಗಿಲ್ಲಿಯ ಜತೆ ಮಾತು ನಿಲ್ಲಿಸಿದ್ದರೂ ಅದು ಕೆಲವೇ ದಿನಕ್ಕೆ ಮಾತ್ರ ಸೀಮಿತವಾಗಿತ್ತು. ಒಟ್ಟಾರೆ ಗಿಲ್ಲಿ ಕಾವ್ಯ ಅವರ ಸ್ನೇಹ ಬಿಗ್‌ ಬಾಸ್‌ ಮನೆಯಲ್ಲಿ ಈ ವರ್ಷ ಗಮನ ಸೆಳೆದ ಅಂಶವಾಗಿತ್ತು.

ಇನ್ನು ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಗಳ ಪೋಷಕರು ಬಂದಾಗಲೂ ಬಹುತೇಕರು ತಮಗೆ ಗಿಲ್ಲಿ ತಮ್ಮ ಮೆಚ್ಚಿನ ಸ್ಪರ್ಧಿ ಎಂದು ಅಭಿಪ್ರಾಯಪಟ್ಟಿದ್ದರು.

ಎಲ್ಲಾ ಕಡೆ ರನ್ನರ್‌ ಅಪ್ ಆಗಿದ್ದ ಗಿಲ್ಲಿ.. ಇಂದು ʼಬಿಗ್‌ ಬಾಸ್‌ʼ ವಿನ್ನರ್:

ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿರುವ ಗಿಲ್ಲಿಗೆ ದೊಡ್ಡಮಟ್ಟದ ಗೆಲುವು ಇದುವರೆಗೆ ಸಿಕ್ಕಿಲ್ಲ. ಹಲವು ಶೋಗಳಲ್ಲಿ ಗಿಲ್ಲಿ ಕಾಣಿಸಿಕೊಂಡಿದ್ದರೂ ಬಹುತೇಕ ಗಿಲ್ಲಿ ರನ್ನರ್‌ ಅಪ್‌ ಪ್ರಶಸ್ತಿಯನ್ನೇ ಪಡೆದುಕೊಂಡಿದ್ದರು. ಈ ಸಲ ವಿನ್ನರ್‌ ಆಗಿದ್ದಾರೆ. ಅದು ಕೂಡ ಲಕ್ಷಾಂತರ ಮಂದಿಯ ಬೆಂಬಲದೊಂದಿಗೆ ಎನ್ನುವುದು ವಿಶೇಷ.

ಗಿಲ್ಲಿ ಅವರ ಗೆಲುವನ್ನು ವೀಕ್ಷಕರು ಸಂಭ್ರಮಿಸಿದ್ದಾರೆ. ಗಿಲ್ಲಿ ನಿಜವಾದ ವಿನ್ನರ್‌, ಇದು ಅವರ ವ್ಯಕ್ತಿತ್ವಕ್ಕೆ ಸಿಕ್ಕ ಗೆಲುವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಗಿಲ್ಲಿ ಟ್ರೆಂಡ್‌ ಆಗಿದ್ದಾರೆ.