ಕರಾವಳಿ ಅಭಿವೃಧ್ದಿ ಪ್ರಾಧಿಕಾರದಿಂದ ಮೂಲ ಸೌಲಭ್ಯವನ್ನು ಕಲ್ಪಿಸುವ ಕಾರ್ಯ: ಮಟ್ಟಾರ್ ರತ್ನಾಕರ ಹೆಗ್ಡೆ

ಉಡುಪಿ, ಮೇ 29: ಗ್ರಾಮಾಂತರ ಜನರ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸರ್ಕಾರವು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮುಖಾಂತರ ಮೂಲ ಸೌಲಭ್ಯವನ್ನು ಕಲ್ಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆಯವರು ತಿಳಿಸಿದರು.

ಅವರು ಇತ್ತೀಚೆಗೆ ಉಡುಪಿ ತಾಲೂಕಿನ ಕಾಪು ವಿಧಾನ ಸಭಾ ಕ್ಷೇತ್ರದ ಪೆರ್ಡೂರಿನ ಪಕ್ಕಾಲು ಎಂಬಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ ಮತ್ತು ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಪಿಲಾರು ಜಾರಂತಾಯ ದೇವಸ್ಥಾನದಿಂದ ಕಲ್ಲಿಮಾರು ಸಂಪರ್ಕ ರಸ್ತೆ, ಪಿಲಾರು ಗ್ರಾಮದ ಜಾಲಮೇಲ್ ಜಂಗಮ ಮಠ ಕಾಲನಿ ರಸ್ತೆ, ಪಿಲಾರು ಪರಾಡಿ ಕರ‍್ದಬ್ಬು ದೈವಸ್ಥಾನದಿಂದ ಕಲ್ಲಿಮಾರು ವರೆಗಿನ ರಸ್ತೆ ಕಾಂಕ್ರೀಟೀಕರಣ ಮತ್ತು ಮುದರಂಗಡಿ ಬಯಲುರಂಗ ಮಂದಿರ ಮುಂತಾದ ಒಟ್ಟು ಸುಮಾರು ರೂ. 2.00 ಕೋಟಿಯ ಕಾಮಗಾರಿಗಳನ್ನು ವೀಕ್ಷಿಸಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿದರು. ಸರಕಾರಿ ಶಾಲಾ ಮೈದಾನದ ಗ್ಯಾಲರಿಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿ ಪರಿಶೀಲನಾ ಸಮಯ ಮುದರಂಗಡಿಯ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪ ಜಿ, ಸುವರ್ಣ, ಪೆರ್ಡೂರು ಪಂಚಾಯತ್ ಉಪಾಧ್ಯಕ್ಷ ಸುರೇಶ್ ಶೇರಿಗಾರ್, ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಹೆಗ್ಡೆ, ಆನಂದ ಕುಲಾಲ್, ಮಲ್ಲಿಕಾ ಶೆಟ್ಟಿ, ಸದಾನಂದ ಕುಲಾಲ್, ಸುಭಾಷ್ ನಾಯಕ ತಾ.ಪಂ.ಸದಸ್ಯರು. ತುಕರಾಂ ಪೆರ್ಡೂರು, ಶಿವರಾಂ ಭಂಡಾರಿ ಮುದರಂಗಡಿ ಗ್ರಾಮ ಪಂಚಾಯತ್ ಸದಸ್ಯರು, ರವೀಂದ್ರ ಪ್ರಭು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಮತ್ತು ನವೀನ್ ಶೆಟ್ಟಿ ಹಾಗೂ ಸ್ಥಳೀಯ ಬಿ.ಜೆ.ಪಿ ಮುಖಂಡರು ಹಾಜರಿದ್ದರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ   ಪ್ರದೀಪ್ ಡಿ’ಸೋಜಾ, ಕೆ. ಚಂದ್ರಕಾಂತ್ ವಲಯಾಧಿಕಾರಿ, ಶ್ರೀ ಪ್ರಭಾಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್. ಉಡುಪಿ ಮತ್ತು ಇಂಜಿನಿಯರರು ಉಪಸ್ಥಿತರಿದ್ದರು.