ಸ್ಯಾನ್ ಫ್ರಾನ್ಸಿಸ್ಕೋ : ಗೂಗಲ್ ತನ್ನ ಜಿಮೇಲ್ ಸೇವೆಯ ಬೇಸಿಕ್ ಎಚ್ಟಿಎಂಎಲ್ ಆವೃತ್ತಿಯನ್ನು (Basic HTML version) 2024 ರ ಜನವರಿಯಲ್ಲಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. “ನೀವು ಜನವರಿ 2024 ರವರೆಗೆ ನಿಮ್ಮ ಬ್ರೌಸರ್ನಲ್ಲಿ ಬೇಸಿಕ್ ಎಚ್ಟಿಎಂಎಲ್ ಆವೃತ್ತಿಯನ್ನು ನೋಡಬಹುದು. ಈ ದಿನಾಂಕದ ನಂತರ ಜಿಮೇಲ್ ಸ್ವಯಂಚಾಲಿತವಾಗಿ ಸ್ಟ್ಯಾಂಡರ್ಡ್ ಆವೃತ್ತಿಗೆ ಬದಲಾಗುತ್ತದೆ” ಎಂದು ಗೂಗಲ್ ಹೇಳಿದೆ. ಗೂಗಲ್ ತನ್ನ ಜಿಮೇಲ್ನಲ್ಲಿನ ಬೇಸಿಕ್ ಎಚ್ಟಿಎಂಎಲ್ ಆವೃತ್ತಿಯನ್ನು ನಿಲ್ಲಿಸುವುದಾಗಿ ಘೋಷಿಸಿದೆ.
ಜನವರಿ 2024 ರವರೆಗೆ ನೀವು ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬೆಂಬಲಿಸದ ಬ್ರೌಸರ್ ಅನ್ನು ಬಳಸುತ್ತಿದ್ದರೆ ನಿಮ್ಮ ಕಂಪ್ಯೂಟರ್ ಮತ್ತು ನಿಮ್ಮ ಮೊಬೈಲ್ ಬ್ರೌಸರ್ನಲ್ಲಿ ಬೇಸಿಕ್ ಎಚ್ಟಿಎಂಎಲ್ ನಲ್ಲಿ ಜಿಮೇಲ್ ನೋಡಬಹುದು ಎಂದು ಕಂಪನಿ ತನ್ನ ಸಪೋರ್ಟ್ ಪೇಜ್ನಲ್ಲಿ ಉಲ್ಲೇಖಿಸಿದೆ.ಬೇಸಿಕ್ ಎಚ್ಟಿಎಂಎಲ್ಗೆ ತನ್ನ ಬೆಂಬಲವನ್ನು ನಿಲ್ಲಿಸಲು ಗೂಗಲ್ ಯಾವಾಗ ನಿರ್ಧರಿಸಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ “ನಿಮ್ಮ ಬ್ರೌಸರ್ನಲ್ಲಿ ಜಿಮೇಲ್ನ ಇತ್ತೀಚಿನ ಆವೃತ್ತಿಯನ್ನು ಬಳಸಿ” (Use the latest version of Gmail in your browser) ಎಂಬ ಶೀರ್ಷಿಕೆಯ ಈ ಬೆಂಬಲ ಪುಟದಲ್ಲಿ ಇದರ ಬಗ್ಗೆ ಮಾಹಿತಿಯನ್ನು ಕಾಣಬಹುದು.
ಗೂಗಲ್ ನ್ಯೂಸ್ಗೆ ಮತ್ತೆರಡು ಭಾರತೀಯ ಭಾಷೆಗಳ ಸೇರ್ಪಡೆ: ಭಾರತೀಯ ಭಾಷಾ ಸುದ್ದಿ ವ್ಯವಸ್ಥೆಯನ್ನು ಬೆಂಬಲಿಸುವ ಮತ್ತು ಭಾರತೀಯ ಭಾಷಾ ವೆಬ್ ಅನ್ನು ವಿಸ್ತರಿಸುವ ವಿಷಯದಲ್ಲಿ ಗೂಗಲ್ ಇಂಡಿಯಾ ಎರಡು ಮಹತ್ವದ ಬೆಳವಣಿಗೆಗಳನ್ನು ಘೋಷಿಸಿದೆ. ಮೊದಲನೆಯದಾಗಿ, ಗೂಗಲ್ ನ್ಯೂಸ್ ಈಗ ಇನ್ನೂ ಎರಡು ಭಾರತೀಯ ಭಾಷೆಗಳಾದ ಗುಜರಾತಿ ಮತ್ತು ಪಂಜಾಬಿಗಳನ್ನು ಸ್ಯೂಸ್ಗೆ ಸೇರಿಸಲಿದೆ. ಅಲ್ಲಿಗೆ ಗೂಗಲ್ ನ್ಯೂಸ್ನಲ್ಲಿ ಒಟ್ಟು 10 ಭಾರತೀಯ ಭಾಷೆಗಳು ಬೆಂಬಲಿತವಾಗಲಿವೆ. ಎರಡನೆಯದಾಗಿ, ಈ ವರ್ಷದ ಆರಂಭದಲ್ಲಿ ಘೋಷಿಸಲಾದ ಜಿಎನ್ಐ ಭಾರತೀಯ ಭಾಷೆಗಳ ಯೋಜನೆಯಡಿ ಭಾರತದಾದ್ಯಂತ ಸುದ್ದಿ ಪ್ರಕಾಶಕರಿಂದ 600 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಇದರಲ್ಲಿ 300ಕ್ಕೂ ಹೆಚ್ಚು ಪ್ರಕಾಶಕರನ್ನು ಆಯ್ಕೆ ಮಾಡಲಾಗಿದೆ.
ಆಂಡ್ರಾಯ್ಡ್ನಲ್ಲಿ Select all ಬಟನ್ ಸೇರ್ಪಡೆ: ಏತನ್ಮಧ್ಯೆ ಗೂಗಲ್ ಆಂಡ್ರಾಯ್ಡ್ನಲ್ಲಿ ಜಿಮೇಲ್ಗೆ “Select all” ಬಟನ್ ಅನ್ನು ಸೇರಿಸುತ್ತಿದೆ. ಈ ಹೊಸ ವೈಶಿಷ್ಟ್ಯವು ಇನ್ಬಾಕ್ಸ್ನಲ್ಲಿರುವ ಮೇಲ್ಗಳನ್ನು ಸುಲಭವಾಗಿ ಡಿಲೀಟ್ ಮಾಡಲು ಸಹಾಯ ಮಾಡುತ್ತದೆ. Select all ಮೂಲಕ ಈಗ ನೀವು ಏಕಕಾಲಕ್ಕೆ 50 ಮೇಲ್ಗಳನ್ನು ಸೆಲೆಕ್ಟ್ ಮಾಡಬಹುದು ಮತ್ತು ಅವನ್ನು ಒಂದೇ ಬಾರಿಗೆ ಡಿಲೀಟ್ ಮಾಡಬಹುದು.
Select all ಇಲ್ಲದಿರುವಾಗ ಆಂಡ್ರಾಯ್ಡ್ನಲ್ಲಿ ಇನ್ಬಾಕ್ಸ್ನಲ್ಲಿರುವ ಮೇಲ್ಗಳನ್ನು ಡಿಲೀಟ್ ಮಾಡುವಾಗ ಒಂದೊಂದೇ ಮೇಲ್ಗಳನ್ನು ಸೆಲೆಕ್ಟ್ ಮಾಡಬೇಕಿತ್ತು. ಇದು ತೀರಾ ಸಮಯ ತೆಗೆದುಕೊಳ್ಳುವ ಹಾಗೂ ಕಿರಿಕಿರಿಯ ಪ್ರಕ್ರಿಯೆಯಾಗಿತ್ತು. ಈಗ Select all ಮೂಲಕ ಇನ್ಬಾಕ್ಸ್ ಖಾಲಿ ಮಾಡುವುದು ಸುಲಭವಾಗಿದೆ.