ಉಡುಪಿ : ಉಡುಪಿಯ ಪರ್ಯಾಯವನ್ನು ಯಾವುದೇ ಲೋಪದೋಪ ದೋಷವಿಲ್ಲದೇ ನಾಡಹಬ್ಬದಂತೆ ವಿಜೃಂಭಣೆಯಿಂದ ನಡೆಸಬೇಕು ಹಾಗೂ ಉಡುಪಿಯ ಪರ್ಯಾಯದಲ್ಲಿ ಭಾಗಿಯಾಗಲು ಹೊರ ಜಿಲ್ಲೆಯಿಂದ ಸಾಗರೋಪಾದಿಯಲ್ಲಿ ಬರುವ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಗಳಾಗದಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ, ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಮಂಗಳವಾರ ಉಡುಪಿಯ ಕೃಷ್ಣ ಮಠದ ಅಥಿತಿ ಗೃಹದಲ್ಲಿ ನಡೆದ ಪರ್ಯಾಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಡುಪಿ ಪರ್ಯಾಯಕ್ಕೆ ರಾಜ್ಯ ಸರ್ಕಾರದ ವತಿಯಿಂದ 3 ಕೋಟಿ, ಜಿಲ್ಲಾಡಳಿತ, ನಗರ ಸಭೆ ಸೇರಿದಂತೆ ಒಟ್ಟು 11 ಕೋಟಿ ರೂ. ಗಳ ಅನುದಾನ ನೀಡಲಾಗಿದ್ದು, ಯಾವುದೇ ಕುಂದು ಕೊರತೆ ಬಾರದಂತೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ದೊಡ್ಡ ಪ್ರಮಾಣದಲ್ಲಿ ಅಗಮಿಸುವ ಭಕ್ತಾಧಿಗಳಿಗೆ ವಸತಿ, ಕುಡಿಯುವ ನೀರು, ಶೌಚಾಲಯ, ಹಾಗೂ ಸಂಚಾರ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಒದಗಿಸಬೇಕು. ಪರ್ಯಾಯಕ್ಕೆ ಪೂರಕವಾಗಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಕೆಲಸಗಳನ್ನು ನಿರ್ವಹಿಸಿ ಪರ್ಯಾಯವನ್ನು ಯಶಸ್ವಿಯಾಗಿಸಬೇಕು ಎಂದು ಹೇಳಿದರು.
ಶಾಸಕ ರಘಪತಿ ಭಟ್ ಮಾತನಾಡಿ, ಜನವರಿ 8 ಬುಧವಾರದಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಜೋಡುಕಟ್ಟೆಯಿಂದ ಮೆರವಣಿಗೆಯೊಂದಿಗೆ ಪುರ ಪ್ರವೇಶಿಸಲಿದ್ದಾರೆ. ರಾತ್ರಿ 8 ಗಂಟೆಗೆ ರಥಬೀದಿಯಲ್ಲಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ ಪಲಿಮಾರು ಮಠದ ಪರ್ಯಾಯ ಶ್ರೀ ವಿದ್ಯಾತೀರ್ಥ ಶ್ರೀಪಾದರಿಂದ ಪೌರ ಸನ್ಮಾನ ನೆರವೇರುವುದು. ಇದೇ ಮೊದಲ ಬಾರಿಗೆ ಜನವರಿ 15 ರಂದು ಅದಮಾರು ಮಠ ಮತ್ತು ಮಲ್ಪೆ ಭಾಗದಿಂದ ಮಾತ್ರ ಹೊರ ಕಾಣಿಕೆ ಸ್ವೀಕರಿಸಲಾಗುವುದು. ಪರ್ಯಾಯದ ಬಳಿಕ ಪ್ರತೀ 15 ದಿನಗಳಿಗೊಮ್ಮೆ (ಏಕಾದಶಿಯನ್ನ ಹೊರತು ಪಡಿಸಿ ರವಿವಾರದಂದು) ಹೊರಕಾಣಿಕೆಗಳನ್ನು ಸ್ವೀಕರಿಸಲಾಗುವುದು ಎಂದು ಹೇಳಿದರು.
ಜನವರಿ 18 ರಂದು ಬೆಳಗ್ಗಿನ ಜಾವ 2 ಗಂಟೆಗೆ ಪರ್ಯಾಯ ಮೆರವಣಿಗೆ ಆರಂಭವಾಗಲಿದೆ. ಮಧ್ಯಾಹ್ನ 2.30 ಗಂಟೆಗೆ ಸರಿಯಾಗಿ ಪರ್ಯಾಯ ದರ್ಬಾರನ್ನು ಆಯೋಜಿಸಲಾಗಿದ್ದು, ದರ್ಬಾರಿನ ಅಧ್ಯಕ್ಷತೆಯನ್ನು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ವಹಿಸಲಿದ್ದು, ಮುಖ್ಯಮಂತ್ರಿಗಳು, ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಜನವರಿ 18 ರಿಂದ 22 ವರೆಗೆ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತದೆ. ಈ ಬಾರಿಯ ಪರ್ಯಾಯದಲ್ಲಿ ಪರಿಸರ ಸ್ನೇಹಿ ಬ್ಯಾನರ್ಗಳನ್ನು ಬಳಸಲಾಗಿರುವುದು ವಿಶೇಷ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಾತನಾಡಿ, ಪರ್ಯಾಯ ಹಿನ್ನಲೆ ನಗರದ ರಸ್ತೆಗಳ ದುರಸ್ತಿ ಕಾರ್ಯ ನಡೆದಿದ್ದು, ದಾರಿ ದೀಪಗಳ ದುರಸ್ಥಿ, ನೈರ್ಮಲ್ಯ ನಿವರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ನೈರ್ಮಲ್ಯತೆ ದೃಷ್ಟಿಯಿಂದ ಶೌಚಾಲಯಗಳ ನಿರ್ಮಾಣ, ಪೊಲೀಸ್ ಇಲಾಖೆಯಿಂದ ಬೆಂಗಾವಲು ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಯಿಂದ ಇಲಾಖಾ ಕಾರ್ಯಕ್ರಮಗಳನ್ನು ಬಿಂಬಿಸುವ ಟ್ಯಾಬ್ಲೋಗಳನ್ನು ಮಾಡಲಾಗಿದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಎಲ್ಇಡಿ ಪರದೆ ಮೂಲಕ ಉಡುಪಿಗೆ ಸಂಬಂಧಿಸಿದ ವಿಚಾರಗಳನ್ನು ಪ್ರದರ್ಶಿಸಲಾಗುವುದು, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗುವುದು. ಅಧಿಕಾರಿಗಳು ಹಾಗೂ ಎಲ್ಲಾ ಇಲಾಖೆಗಳು ತಮ್ಮ ಕೆಲಸವನ್ನು ಒಗ್ಗಟಿನಿಂದ ನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ನಗರವನ್ನು ಸುಂದರವಾಗಿರಿಸಿ, ನೈರ್ಮಲ್ಯವನ್ನಿರಿಸಲು ಟೆಂಡರ್ ಕರೆದಿದ್ದು, ಕಾರ್ಯಗಳ ಭರದಿಂದ ಸಾಗುತ್ತಿದೆ. 12 ಸ್ಥಳಗಳಲ್ಲಿ 30 ಕ್ಕಿಂತ ಹೆಚ್ಚು ಶೌಚಾಲಯಗಳನ್ನು ಹಾಗೂ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಜಿಲ್ಲಾಡಳಿತ ಪರ್ಯಾಯವನ್ನು ಯಶಸ್ವಿಗೊಳಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಸಚಿವರು, ಶಾಸಕರು ಅದಮಾರು ಮಠಕ್ಕೆ ಭೇಟಿ ನೀಡಿ ಶ್ರೀ ವಿಶ್ವಪ್ರಿಯ ಶ್ರೀಪಾದರ ಆರ್ಶೀವಾದ ಪಡೆದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲ್ಲೋತ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಎಸ್ಪಿ ವಿಷ್ಣುವರ್ಧನ್, ನಗರ ಸಭೆ ಪೌರಾಯುಕ್ತ ಆನಂದ್ ಕಲ್ಲೋಳಿಕರ್ , ಶ್ರೀಕೃಷ್ಣ ಸೇವಾ ಸಮಿತಿಯ ಸದಸ್ಯರು, ಮಠದ ಸಿಬ್ಬಂದಿಗಳು, ವಿವಿಧ ಇಲಾಖಾಧಿಕಾರಿಗಳು ಮತ್ತಿತರರು ಹಾಜರಿದ್ದರು.