ಮಣಿಪಾಲ: ಬ್ಯಾರೀಸ್ ಕಾಲೇಜಿನ ವಿದ್ಯಾರ್ಥಿಗಳ ಇಂಟರ್‌ಶಿಪ್ ಸಮಾರೋಪ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನಲ್ಲಿ ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ, ಬಿಬಿಎ ಹಾಗೂ ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ವಿಶೇಷ ಇಂಟರ್‌ಶಿಪ್ ಕಾರ್ಯಕ್ರಮವನ್ನು ಮೇ 4ರಿಂದ ಮೇ 16ರವರೆಗೆ ಆಯೋಜಿಸಲಾಗಿತ್ತು.

ಇಂಟರ್‌ಶಿಫ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾದ ಪ್ರಾಯೋಗಿಕ ಜ್ಞಾನ ಹಾಗೂ ವೃತ್ತಿಪರ ಕೌಶಲ್ಯಗಳನ್ನು ತಿಳಿಸಲಾಯಿತು. ಟ್ಯಾಲಿ, ಜಿಎಸ್‌ಟಿ ಹಾಗೂ ಡೇಟಾ ಸೈನ್ಸ್ ವಿಷಯಗಳಲ್ಲಿ ತಜ್ಞರಿಂದ ಮಾರ್ಗದರ್ಶನ ನೀಡಲಾಯಿತು. ವಿಶೇಷವಾಗಿ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಉದ್ಯೋಗ ಕ್ಷೇತ್ರದಲ್ಲಿ ಎದುರಾಗುವ ನೈಜ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಪ್ರಯತ್ನ ಮಾಡಲಾಯಿತು.

ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸ ಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ.ಸುರ್ಜಿತ್ ಸಿಂಗ್ ಪಾಬ್ಲಾ ಮಾತನಾಡಿ, ಇಂತಹ ಇಂಟರ್‌ಶಿಫ್ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವೃತ್ತಿಪರ ನೈಪುಣ್ಯತೆಯನ್ನು ವೃದ್ಧಿಸುವುದರ ಜೊತೆಗೆ ಭವಿಷ್ಯದ ಉದ್ಯೋಗಾ ವಕಾಶಗಳಿಗೆ ಭದ್ರ ಅಡಿಪಾಯವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಶೆಟ್ಟಿ ಮಾತನಾಡಿ, ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಇಂತಹ ಹೊಸ ಕೌಶಲ್ಯಾಧಾರಿತ ತರಬೇತಿಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಕೂಲ್ ಆಫ್ ಐಟಿ ಸ್ಕಿಲ್ಸ್‌ನ ಸಂಯೋಜಕಿ ರಾಜಲಕ್ಷ್ಮಿ, ಎಂಎಸ್‌ಡಿಸಿ ರಿಜಿಸ್ಟರ್ ಡಾ.ಅಂಜಯ್ಯ ದೇವಿನೇನಿ, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಹಂಝಾ ಹಾಗೂ ಗಣಕ ವಿಭಾಗದ ಮುಖ್ಯಸ್ಥೆ ನೂತನ ಎಸ್. ಉಪಸ್ಥಿತರಿದ್ದರು.