ಬಂಟ್ವಾಳ: ಪತಿ ಸಾವಿನಿಂದ ಮನನೊಂದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳ ಜೊತೆ ನದಿಗೆ ಹಾರಿದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರು ನೇತ್ರಾವತಿ ಸೇತುವೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಮೈಸೂರು ಸರಸ್ವತಿ ಪುರಂ ನಿವಾಸಿಗಳಾದ ಕವಿತಾಮಂಡಣ್ಣ(55), ಮಕ್ಕಳಾದ ಕೌಶಿಕ್ ಮಂಡಣ್ಣ(29) ಹಾಗೂ ಕಲ್ಪಿತಾ ಮಂಡಣ್ಣ(22) ನದಿಗೆ ಹಾರಿ ಸಾವನ್ನಪ್ಪಿದ್ದಾರೆ. ಈ ಮೂವರ ಪೈಕಿ ಕವಿತಾ ಮಂಡಣ್ಣರವರನ್ನು ಗೂಡಿನಬಳಿ ಸಮೀಪ ಸ್ಥಳೀಯ ಈಜುಗಾರರು ರಕ್ಷಿಸಿದ್ದು , ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ನೀರುಪಾಲಾಗಿದ್ದು ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಇವರು ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ಕಡಂಗಳ ಬಳ್ಳಚಂಡ ಕುಟುಂಬದವರು.
ಘಟನೆ ವಿವರ:
ಕವಿತಾ ಮಂಡಣ್ಣ ರವರ ಪತಿ ಕಿಶನ್ ರವರು ಕಳೆದ ಕೆಲದಿನಗಳ ಹಿಂದೆ ವ್ಯವಹಾರದ ನಿಮಿತ್ತ ಮನೆಯಿಂದ ಹೋದವರು ವಾಪಾಸು ಬಂದಿರಲಿಲ್ಲ. ಅವರಿಗಾಗಿ ಮನೆ ಮಂದಿ ತೀವ್ರ ಹುಡುಕಾಟ ನಡೆಸಿದ್ದರು. ಈ ನಡುವೆ ಶನಿವಾರ 11ಗಂಟೆಯ ವೇಳೆಗೆ ಪತಿ ಕಿಶನ್ ರವರು ಶವವಾಗಿ ಮೈಸೂರು ಸಮೀಪ ಪತ್ತೆಯಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಹೇಳಲಾಗಿತ್ತು.
ಸಂಜೆ 5 ಗಂಟೆಯ ವೇಳೆಗೆ ಶವವನ್ನು ಇವರ ಮನೆಗೆ ತರಲಾಗಿದ್ದು, ಶವಪರೀಕ್ಷೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಮಾನಸಿಕವಾಗಿ ನೊಂದು ಕವಿತಾ ಮಂಡಣ್ಣ ಮತ್ತು ಮಕ್ಕಳು ಆತ್ಮಹತ್ಯೆ ತೀರ್ಮಾನ ಕೈಗೊಂಡಿದ್ದಾರೆಂದು ಹೇಳಲಾಗಿದೆ.
ಸಂಜೆಯ ವೇಳೆಗೆ ತನ್ನ ಸಹೋದರನಿಗೆ ಕರೆಮಾಡಿದ ಮಂಡಣ್ಣ, ಪತಿಯ ಸಾವಿನ ವಿಚಾರ ತಿಳಿಸಿ, ನಾವಿನ್ನು ಬದುಕುವುದಿಲ್ಲ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು, ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.
ತಡರಾತ್ರಿ 10.50 ರ ಸುಮಾರಿಗೆ ಈಕೋ ವಾಹನದಲ್ಲಿ ಬಂದ ಮೂವರು ವಾಹನದಿಂದ ಇಳಿದು ಸೇತುವೆಯ ಪಕ್ಕ ನಡೆದುಕೊಂಡು ಹೋಗುತ್ತಿದ್ದರು. ಇವರನ್ನು ಕಂಡ ಸ್ಥಳೀಯರು ವಾಕಿಂಗ್ ಎಂದು ಭಾವಿಸಿದ್ದರು. ಕೆಲಕ್ಷಣದಲ್ಲಿಯೇ, ಸಾಕುನಾಯಿ ಸಹಿತ ಮೂವರೂ ನದಿಗೆ ಹಾರಿದ್ದಾರೆ. ತಕ್ಷಣ ರಿಕ್ಷಾಚಾಲಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಗರ ಠಾಣಾಧಿಕಾರಿ ಚಂದ್ರಶೇಖರ್ ಮತ್ತವರ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ರಕ್ಷಣಾ ಕಾರ್ಯ ನಡೆಸಿದರು.
ಈ ಮಹಿಳೆಯನ್ನು ಸ್ಥಳೀಯ ಈಜುಗಾರರು ರಕ್ಷಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸಾಕು ನಾಯಿಯನ್ನೂ ರಕ್ಷಿಸಲಾಗಿದೆ. ಆದರೆ ಅದು ತಪ್ಪಿಸಿಕೊಂಡು ಹೋಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಇನ್ನಷ್ಟೇ ಪ್ರಕರಣ ದಾಖಲಾಗಿದ್ದು, ಮೃತರ ಸಂಬಂಧಿಗಳಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ವೃತ್ತನಿರೀಕ್ಷಕ ಟಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ, ನಗರ ಠಾಣಾಧಿಕಾರಿ ಚಂದ್ರಶೇಖರ್ ತನಿಖೆ ನಡೆಸುತ್ತಿದ್ದಾರೆ.