ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಎರಡನೇ ಬಲಿಯಾಗಿದೆ. ಎಪ್ರಿಲ್ 19ರಂದು ಮೃತಪಟ್ಟ ಮಹಿಳೆಯ ಸಂಬಂಧಿ ಮಹಿಳೆಯೋರ್ವರು ನಿನ್ನೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಭಾನುವಾರ ಮೃತಪಟ್ಟ ಮಹಿಳೆಯ ಶವಸಂಸ್ಕಾರವನ್ನು ಮಂಗಳೂರಿನಲ್ಲಿ ನಡೆಸಿದಾಗ ಸ್ಥಳೀಯವಾಗಿ ಜನರು ಪ್ರತಿಭಟಿಸಿದ್ದರು. ಗುರುವಾರವು ಮೃತಪಟ್ಟ 75ರ ವೃದ್ದೆಯ ಶವ ಸಂಸ್ಕಾರವು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿತು. ಮಂಗಳೂರಿನ ಎರಡು ಮೂರು ಕಡೆಗಳಲ್ಲಿ ಇದಕ್ಕೆ ವಿರೋಧ ವ್ಯಕ್ತವಾದಾಗ ಆಡಳಿತ ಬಂಟ್ವಾಳದಲ್ಲಿ ಈ ಕಾರ್ಯಕ್ಕೆ ಮುಂದಾಯಿತು. ಇದಕ್ಕೆ ವಿರೋಧ ಉಂಟಾದಾಗ ರಾತ್ರಿ ಸುಮಾರು 11 ಗಂಟೆಯ ಸಮಯ ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ರವರನ್ನು ಸಂಪರ್ಕಿಸಿತು.
ತಕ್ಷಣವೇ ಮಾನವೀಯತೆ ಮೆರೆದ ಶಾಸಕರು ತನ್ನ ಪತ್ನಿ ಪುತ್ರರಲ್ಲಿ ಮಾತುಕತೆ ನಡೆಸಿ ಸಂಸದ ನಳಿನ್ ಕುಮಾರ್ ಕಟೀಲ್ ರವರಿಗೆ ತಿಳಿಸಿದ ಬಳಿಕ ಶವಸಂಸ್ಕಾರಕ್ಕೆ ಎಲ್ಲಿಯೂ ಅವಕಾಶ ಸಿಗದಲ್ಲಿ ತನ್ನ ಸ್ವಂತ ಸ್ಥಳದಲ್ಲಿ ನಾನು ಅವಕಾಶ ನೀಡತ್ತೇನೆ ಇಲ್ಲಿ ತಂದು ಅಂತ್ಯ ಸಂಸ್ಕಾರ ಮಾಡಬಹುದು.
ಯಾಕೆಂದರೆ ಮೃತಮಹಿಳೆ ನನ್ನ ಕ್ಷೇತ್ರದವರು. ಶವಸಂಸ್ಕಾರಕ್ಕೂ ಅವಕಾಶ ನೀಡದ ದಯನೀಯ ಸ್ಥಿತಿ ನನ್ನ ಕ್ಷೇತ್ರದ ಮಹಿಳೆಗೆ ಬರಬಾರದು ಎಂದರು.
ಶಾಸಕರು ಬೇರೆ ಸ್ಥಳ ಸೂಚಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳಿಗೆ ಶಾಸಕರ ಈ ಮಾತಿನಿಂದ ಆತ್ಮ ವಿಶ್ವಾಸ ಹೆಚ್ಚಿತು.
ಕೊನೆಗೂ ಪ್ರತ್ಯೇಕ ಸ್ಥಳದಲ್ಲಿ ಶವಸಂಸ್ಕಾರ ನಡೆಸಲಾಯಿತು.