ಮಂಗಳೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಆಯ ತಪ್ಪಿ ಬಾವಿಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ರಾಯಿಯ ಬಲ್ಲಾಳ್ ಬೆಟ್ಟು ನಿವಾಸಿ ಮೋನಪ್ಪ ಬಂಗೇರ ಅವರ ಮನೆಯ ಎರಡು ನಾಯಿಗೆ ಹೊಂಚು ಹಾಕಿದ ಚಿರತೆ, ನಾಯಿಯನ್ನು ಹಿಡಿಯಲು ಹೋದಾಗ ಆಯತಪ್ಪಿ ಮನೆಯ ಅಂಗಳದಲ್ಲಿ ಇದ್ದ ಬಾವಿಗೆ ಬಿದ್ದಿದೆ. ಇಂದು ಬೆಳಗ್ಗೆ ಮನೆಯವರು ಚಿರತೆ ನೋಡಿ ಅರಣ್ಯ ಇಲಾಖೆಯ ಅಧಿಕಾರಿಗೆ ತಿಳಿಸಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಚಿರತೆಯನ್ನು ಮೇಲೆತ್ತುವ ಕಾರ್ಯಚರಣೆ ಮಾಡಿದ್ದಾರೆ.
ಈ ಪ್ರದೇಶದಲ್ಲಿ ಹಲವು ಸಮಯದಿಂದ ಚಿರತೆಗಳ ಕಾಟ ಇದ್ದು, ನಾಯಿಗಳನ್ನು ಹಾಗೂ ಜಾನುವಾರುಗಳನ್ನು ಚಿರತೆ ಕೊಂಡೊಯ್ದಿದೆ ಅಂತ ಗ್ರಾಮಸ್ಥರು ದೂರಿದ್ದಾರೆ.