ಬಂಟ್ವಾಳ: ಅಪಾಯದ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ 5ನೇ ತರಗತಿ ವಿದ್ಯಾರ್ಥಿಯೊಬ್ಬನ ಚುರುಕು ನಿರ್ಧಾರದಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಾನ್ವಿತ್ ತನ್ನ ಸಮಯಪ್ರಜ್ಞೆಯಿಂದ ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿಯೊಬ್ಬರಿಗೆ ಎದುರಾಗಿದ್ದ ಅಪಾಯವನ್ನು ತಪ್ಪಿಸಿದ್ದಾನೆ.
ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ತಯಾರಿ ನಡೆಯುತ್ತಿದ್ದ ವೇಳೆ ಸಿಬ್ಬಂದಿಯೊಬ್ಬರ ಬೆರಳು ಆಕಸ್ಮಿಕವಾಗಿ ವಿದ್ಯುತ್ ಚಾಲಿತ ತುರಿಯುವ ಯಂತ್ರಕ್ಕೆ ಸಿಲುಕಿಕೊಂಡಿದೆ. ನೋವಿನಿಂದ ಸಿಬ್ಬಂದಿ ಕಿರುಚಿಕೊಂಡಿದ್ದು, ಈ ಶಬ್ದ ಕೇಳಿದ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಮಾನ್ವಿತ್ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾನೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ, ಯಾವುದೇ ಗಾಬರಿಗೊಳಗಾಗದೆ ಕೂಡಲೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾನೆ. ಇದರಿಂದ ಸಿಬ್ಬಂದಿಗೆ ಮತ್ತಷ್ಟು ಅಪಾಯವಾಗುವುದನ್ನು ತಪ್ಪಿಸಲು ಸಾಧ್ಯವಾಗಿದೆ.
ಎಲ್ಲರಿಂದಲೂ ಮೆಚ್ಚುಗೆ
ಅಪಾಯದ ಸಂದರ್ಭದಲ್ಲಿ ಧೈರ್ಯ ಹಾಗೂ ಸಮಯಪ್ರಜ್ಞೆ ಮೆರೆದ ಮಾನ್ವಿತ್‌ನ ಕಾರ್ಯಕ್ಕೆ ಶಾಲೆಯ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ರವಿ ಅಂಚನ್ ಹಾಗೂ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋನಯ್ಯ ನಾಯಕ್ ಹಾಗೂ ಸಿಆರ್‌ಪಿ ಜ್ಯೋತಿ ಕೂಡ ಶಾಲೆಗೆ ಭೇಟಿ ನೀಡಿ ಬಾಲಕನ ಸಮಯೋಚಿತ ಕ್ರಮವನ್ನು ಪ್ರಶಂಸಿಸಿದ್ದಾರೆ.
ಪುಟ್ಟ ವಯಸ್ಸಿನಲ್ಲೇ ಅಪಾಯದ ಕ್ಷಣದಲ್ಲಿ ಗಾಬರಿಗೊಳ್ಳದೆ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ ಮಾನ್ವಿತ್‌ನ ಸಮಯಪ್ರಜ್ಞೆ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.















