ಬಂಟ್ವಾಳ: ಫಾರೂಕ್ ಹತ್ಯೆಯ ಆರೋಪಿಗಳ ಮೇಲೆ ಗುಂಡಿನ ದಾಳಿ; ಓರ್ವನ ಬಂಧನ

ಬಂಟ್ವಾಳ: ಇಲ್ಲಿನ ಮೆಲ್ಕರ್ ನಲ್ಲಿ ನಿನ್ನೆ ಸಂಜೆ ನಡೆದ ಫಾರೂಕ್ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ, ಒಬ್ಬನನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಖಲೀಲ್ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಖಲೀಲ್ ಮತ್ತು ಅವರ ಇಬ್ಬರು ಸಹಚರರು ಬೆಂಗಳೂರಿನತ್ತ ಸಾಗುತ್ತಿದ್ದರು. ಈ ವಿಷಯ ತಿಳಿದ ಪೊಲೀಸರು ಅವರನ್ನು ಬಂಟ್ವಾಳದಿಂದ ಬೆನ್ನಟ್ಟಿದರು. ಈ ವೇಳೆ ಖಲೀಲ್ ಏಕಾಏಕಿ ಪೊಲೀಸ್ ತಂಡದ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಬಂಟ್ವಾಳ ಟೌನ್ ಸ್ಟೇಷನ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವಿನಾಶ್, ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ.

ಘಟನೆಯಲ್ಲಿ ಬಂಟ್ವಾಳ ಗ್ರಾಮೀಣ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಮತ್ತು ಕೊಲೆ ಆರೋಪಿಗಳಲ್ಲಿ ಒಬ್ಬರಾದ ಖಲೀಲ್ ಗಾಯಗೊಂಡಿದ್ದಾರೆ. ಹಫೀಜ್ ಮತ್ತು ಇನ್ನೊಬ್ಬ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಇವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.