ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹೋಬಳಿಯ ನೇತ್ರಾವತಿ ನದಿ ಕಿನಾರೆಯ ಪರಂಬೋಕು ಜಾಗದಲ್ಲಿದ್ದ ಅಕ್ರಮ ಮನೆಗಳನ್ನು ಶನಿವಾರ ತೆರವು ಮಾಡಲಾಯಿತು.
ಬಂಟ್ವಾಳ ಪುರಸಭಾ ವ್ಯಾಪ್ತಿಗೊಳಪಟ್ಟ ಕಂದಾಯ ಇಲಾಖೆಯ ಸುಮಾರು 2 ಎಕರೆ ಜಾಗದಲ್ಲಿದ್ದ ಸುಮಾರು 14 ಮನೆಗಳನ್ನು ತೆರವುಗೊಳಿಸಲಾಯ್ತು. ತಹಶೀಲ್ದಾರ್ ರಶ್ಮಿ ನೇತೃತ್ವದ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪುರಸಭಾ ಮುಖ್ಯಾಧಿಕಾರಿ ನೇತೃತ್ವದ ಪುರಸಭಾ ಅಧಿಕಾರಿಗಳ ತಂಡ ಪೊಲೀಸ್ ಬಂದೋಬಸ್ತ್ ನಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಮೂರು ಜೆಸಿಬಿ ಮೂಲಕ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.
ನೇತ್ರಾವತಿ ನದಿ ಬಳಿಯ ಪರಂಬೋಕು ಸರ್ವೆ ಸಂಖ್ಯೆ 6/3, 9/14 ಎ ಜಮೀನು ಪ್ರಾಕೃತಿಕ ವಿಕೋಪದ ಸಂದರ್ಭ ಮುಳುಗಡೆಯಾಗುತ್ತಿತ್ತು. ಈ ಅಲ್ಲದೇ ಜಮೀನು ಜನ ವಸತಿಗೆ ಯೋಗ್ಯವಲ್ಲದ್ದಾಗಿದ್ದು ಕಂದಾಯ ಇಲಾಖೆಗೆ ಸೇರಿದೆ. 2017 ರಿಂದ ಪುರಸಭೆ ಈ ಮನೆಯಲ್ಲಿ ವಾಸ್ತವ್ಯದಲ್ಲಿದ್ದ ಜನರಿಗೆ ಸ್ಥಳಾಂತರಗೊಳ್ಳುವಂತೆ ನೋಟಿಸ್ ನೀಡಲಾಗಿತ್ತು. ಕಳೆದ ಸೆಪ್ಟೆಂಬರ್ 11ರಂದು ತೆರವಿಗೆ ಅಂತಿಮ ನೋಟೀಸನ್ನು ನೀಡಲಾಗಿತ್ತು. ಆದರೂ ಮನೆಮಂದಿ ಯಾವುದೇ ಸ್ಪಂದನೆ ಹಾಗೂ ಸೂಕ್ತ ದಾಖಲೆ ನೀಡದ ಕಾರಣ ತೆರವು ಕಾರ್ಯಾಚರಣೆ ಮಾಡಲಾಯಿತು.
ಈ ಮನೆಗಳಲ್ಲಿ ಸ್ಥಳೀಯರು ಯಾರು ವಾಸ್ತವ್ಯ ಇಲ್ಲದೆ ಇರುವುದರಿಂದ ತೆರವಿಗೆ ತೀರ್ಮಾನಿಸಲಾಯಿತು.