ಉಡುಪಿ : ಉಡುಪಿಯ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಂಟಕಲ್ನಲ್ಲಿ ಸ್ಥಾಪಿತವಾದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದು ಶೈಕ್ಷಣಿಕ ಸ್ವಾಯತ್ತತೆ (Autonomous) ಹಾಗೂ ಎಲ್ಲಾ ಅರ್ಹ ಬಿ.ಇ ಕೋರ್ಸ್ಗಳಿಗೆ ರಾಷ್ಟ್ರೀಯ ಮೌಲ್ಯಂಕನ ಮಂಡಳಿ(NBA)ಯಿಂದ ಮಾನ್ಯತೆಯನ್ನು ಪಡೆದಿದೆ ಈ ಸಂಸ್ಥೆಗೆ ಸಂಭ್ರಮದ ವಿಚಾರ ಎಂದು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ರತ್ನಕುಮಾರ್ ಅವರು ತಿಳಿಸಿದರು.

ಇನ್ನಂಜೆ ಎಸ್ ವಿ ಎಚ್ ಪಿಯು ಕಾಲೇಜಿನಲ್ಲಿ ಸೆ.8 ರಂದು ಹಮ್ಮಿಕೊಳ್ಳಲಾದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.
ಸಂಸ್ಥೆಗೆ ಸ್ವಾಯತ್ತ ಗರಿ:
ನವದೆಹಲಿಯ ವಿಶ್ವವಿದ್ಯಾನಿಲಯ ಅನುದಾನ ಆಯೋಗವು(ಯುಜಿಸಿ) ಸಂಸ್ಥೆಯ ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನ ನಡೆಸಿ, ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಪರಿಷತ್ತು ಬೆಂಗಳೂರು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇದರ ಶಿಫಾರಸ್ಸಿನ ಮೇರೆಗೆ 2025-26ನೇ ಶೈಕ್ಷಣಿಕ ವರ್ಷದಿಂದ ಮುಂದಿನ ಹತ್ತು ವರ್ಷಗಳ ತನಕ ಶೈಕ್ಷಣಿಕ ಸ್ವಾಯತ್ತತೆಯನ್ನು ಮಂಜೂರು ಮಾಡಿದೆ ಎಂದರು.
ರಾಷ್ಟ್ರೀಯ ಮೌಲ್ಯಂಕನ ಮಂಡಳಿ(NBA)ಯು ಇತ್ತೀಚೆಗೆ ವಿದ್ಯಾಸಂಸ್ಥೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಕೋರ್ಸ್ಗೆ ಮಾನ್ಯತೆ ನೀಡಿರುತ್ತದೆ. ಈ ಮಾನ್ಯತೆಯಿಂದ ಎಲ್ಲಾ ಅರ್ಹ ಪದವಿ ಕೋರ್ಸ್ ಗಳು ರಾಷ್ಟ್ರೀಯ ಮೌಲ್ಯಂಕನ ಮಂಡಳಿಯಿಂದ ಮಾನ್ಯತೆ ಪಡೆದಂತಾಗಿದೆ. ಅವಿಷ್ಕಾರ ಘಟಕ ಮತ್ತು ಉದ್ಯಮಶೀಲತೆ ವಿಭಾಗದಲ್ಲಿ 151-300ರಲ್ಲಿ ಸಂಸ್ಥೆಯ ಉದ್ಯಮಶೀಲ ಘಟಕವು ಗುರುತಿಸಲ್ಪಟ್ಟಿದೆ ಎಂದವರು ತಿಳಿಸಿದರು.
ಹೊಸ ಯೋಜನೆಗಳೊಂದಿಗೆ ಪ್ರಗತಿಯತ್ತ:
ವಿದ್ಯಾಸಂಸ್ಥೆಯು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ (NAAC) ನಿಂದ ಎರಡನೇ ಬಾರಿ “ಎ” ಶ್ರೇಣಿಯ ಮೌಲ್ಯಂಕನ ಪಡೆದಿರುವುದು ವಿದ್ಯಾಸಂಸ್ಥೆಯ ಶೈಕ್ಷಣಿಕ ಪ್ರಗತಿಯನ್ನು ಸೂಚಿಸುತ್ತದೆ. ಕರ್ನಾಟಕ ರಾಜ್ಯದಲ್ಲಿರುವ ಸುಮಾರು 250ಕ್ಕೂ ಮಿಕ್ಕಿ ತಾಂತ್ರಿಕ ಶಿಕ್ಷಣ ವಿದ್ಯಾಸಂಸ್ಥೆಗಳಲ್ಲಿ 15 ವರ್ಷಗಳ ಸೇವಾವಧಿಯಲ್ಲಿ ಶೈಕ್ಷಣಿಕ ಸ್ವಾಯತ್ತತೆ ಪಡೆದ ಬೆರಳೆಣಿಕೆಯ ವಿದ್ಯಾಸಂಸ್ಥೆಗಳಲ್ಲಿ ಬಂಟಕಲ್ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವೂ ಒಂದು ಎಂಬ ಹೆಗ್ಗಳಿಕೆಯೊಂದಿಗೆ ತಾಂತ್ರಿಕ ಶಿಕ್ಷಣದಲ್ಲಿ ಇನ್ನಷ್ಟು ಸಾಧನೆ ಮಾಡುವ ಯೋಜನೆಗಳೊಂದಿಗೆ ಸಂಸ್ಥೆಯು ಧಾಪುಗಾಲು ಇಡುತ್ತಿದೆ ಎಂದವರು ತಿಳಿಸಿದರು.
ಶೈಕ್ಷಣಿಕ ಸ್ವಾಯತ್ತತೆಯಿಂದ ವಿದ್ಯಾಸಂಸ್ಥೆಯು ಕಾಲಕಾಲಕ್ಕೆ ಪಠ್ಯ ವಿಷಯಗಳಲ್ಲಿ ಬದಲಾವಣೆ ತರುವುದು ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಉತ್ತಮವಾಗಿ ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು ನೂತನ ಆವಿಷ್ಕಾರಗಳಿಗೆ ಮತ್ತು ಕಲಿಯುವಿಕೆಯ ಮೌಲ್ಯಮಾಪನ ಮಾಡುವುದು ಸುಲಭವಾಗಿದ್ದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತುಂಬಾ ಅಗತ್ಯವೂ ಆಗಿರುತ್ತದೆ.
ವಿದ್ಯಾರ್ಥಿಗಳಲ್ಲಿ ಕೌಶಲ್ಯ-ಆವಿಷ್ಕಾರಕ್ಕೆ ಉತ್ತೇಜನ:
ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮತ್ತು ಹೊಸ ಆವಿಷ್ಕಾರವನ್ನು ಅಳವಡಿಸಲು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯು ಶ್ರೀ ಸೋದೆ ವಾದಿರಾಜ ಫೌಂಡೇಶನ್ ಎಂಬ ಸೆಕ್ಷನ್ 8 ಕಂಪೆನಿಯನ್ನು ಹುಟ್ಟುಹಾಕಿದ್ದು ಇದರ ಮೂಲಕ ಮಧ್ವ ಇನ್ಕ್ಯುಬೇಟರ್ ಫಾರ್ ಟೆಕ್ನಾಲಜಿ, ಇನ್ನೊವೇಶನ್ ಮತ್ತು ಎಂಟ್ರಿಪ್ರೆನ್ಯೂರ್ಶಿಪ್ ಎಂಬ ಇನ್ಕ್ಯುಬೇಶನ್ ಕೇಂದ್ರ (Incubation Center- Mi-TiE-ಮಿ-ಠಾಯಿ)ವನ್ನು ಪ್ರಾರಂಭಿಸಲಾಗಿದೆ.ಈ ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಮತ್ತು ಅಧಿಕಾರಿಗಳನ್ನು ಈಗಾಗಲೇ ಆಡಳಿತ ಮಂಡಳಿಯವರು ನೇಮಕ ಮಾಡಿರುತ್ತಾರೆ. ಕೇಂದ್ರ ಸರಕಾರದ ಎಮ್.ಎಸ್.ಎಮ್.ಇ ಸಚಿವಾಲಯವು ಸಂಸ್ಥೆಯ ಉದ್ಯಮಶೀಲತಾ ಘಟಕವನ್ನು ಬಿಸಿನೆಸ್ ಇನ್ಕ್ಯುಬೇಟರ್ ಆಗಿ ಗುರುತಿಸಿದೆ ಎಂದವರು ಮಾಹಿತಿ ಬಿಚ್ಚಿಟ್ಟರು.
ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್,ಗವರ್ನಿಂಗ್ ಕೌನ್ಸಿಲ್ ನ ಹರೀಶ್ ಬೆಳ್ಮಣ್ ಮತ್ತು ಡೀನ್ಗಳು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












