ಮುಂಬೈ: ಗ್ರಾಹಕರಿಂದ ಬಂದ ದೂರುಗಳ ಆಧಾರದ ಮೇಲೆ ಮುಂಬೈ ಮತ್ತು ಗುಜರಾತ್‌ನಲ್ಲಿ ನಡೆಸಿದ ಜಂಟಿ ತಪಾಸಣೆ ಹಾಗೂ ಪ್ರಯೋಗಾಲಯ ಪರೀಕ್ಷೆಯಲ್ಲಿ ಎವರೆಸ್ಟ್ ಮತ್ತು ಎಲ್‌ಜಿ ಬ್ರ್ಯಾಂಡ್‌ಗಳ ಕೆಲವು ಇಂಗು ಮಾದರಿಗಳಲ್ಲಿ ಗುಣಮಟ್ಟದ ಕೊರತೆ ಪತ್ತೆಯಾಗಿದೆ ಈ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ನಿಯಮಬಾಹಿರ ಹಾಗೂ ಕಳಪೆ ಗುಣಮಟ್ಟದ ಉತ್ಪನ್ನಗಳ ಬ್ಯಾಚ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸಂಬಂಧಿತ ಕಂಪನಿಗಳಿಗೆ ಸೂಚಿಸಿದೆ.ಹಾಗಾಗಿ ಸದ್ಯ ಈ ಇಂಗು ಮಾರುಕಟ್ಟೆಯಿಂದ ನಿಷೇಧಕ್ಕೊಳಗಾಗಿದೆ.
ನಿಯಮಗಳ ಪ್ರಕಾರ ಕಂಪೌಂಡೆಡ್ ಇಂಗಿನಲ್ಲಿ ಕನಿಷ್ಠ 5% ಆಲ್ಕೋಹಾಲ್ ಸೋಲ್ಯುಬಲ್ ಎಕ್ಸ್‌ಟ್ರಾಕ್ಟ್ ಇರಬೇಕು. ಆದರೆ ಪರೀಕ್ಷೆಗೊಳಪಡಿಸಿದ ಕೆಲವು ಮಾದರಿಗಳಲ್ಲಿ ಈ ಪ್ರಮಾಣ 0%ರಿಂದ 3%ರವರೆಗೆ ಮಾತ್ರ ಕಂಡುಬಂದಿದೆ ಎನ್ನಲಾಗಿದೆ. ಇದರಿಂದ ಉತ್ಪನ್ನದಲ್ಲಿರುವ ಅಸಲಿ ಇಂಗಿನ ಪ್ರಮಾಣ ಹಾಗೂ ಗುಣಮಟ್ಟದ ಕುರಿತು ಪ್ರಶ್ನೆಗಳು ಮೂಡಿವೆ.
ಪರೀಕ್ಷೆಯ ವೇಳೆ ಎವರೆಸ್ಟ್ ಕಂಪನಿಯ ಎಗ್ ಕರಿ ಮಸಾಲೆ, ಚಿಕನ್ ಮಸಾಲೆ ಮತ್ತು ಗರಂ ಮಸಾಲೆ ಉತ್ಪನ್ನಗಳಲ್ಲೂ ಗುಣಮಟ್ಟ ಹಾಗೂ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಅಂಶಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಎಲ್‌ಜಿ ಬ್ರ್ಯಾಂಡ್‌ನ ಕಚ್ಚಾ ಇಂಗಿನಲ್ಲಿ ಪಿಷ್ಟದ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಿರುವುದು ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ನಿಯಮಬಾಹಿರ ಹಾಗೂ ಕಳಪೆ ಗುಣಮಟ್ಟದ ಉತ್ಪನ್ನಗಳ ಬ್ಯಾಚ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸಂಬಂಧಿತ ಕಂಪನಿಗಳಿಗೆ ಸೂಚಿಸಿದೆ. ಅಲ್ಲದೆ, ಮಾರಾಟದ ವಿರುದ್ಧ ಅಗತ್ಯ ಕ್ರಮ ಕೈಗೊಂಡು, ಗುಣಮಟ್ಟ ಸುಧಾರಣೆಗೆ ಸಮಗ್ರ ಆಕ್ಷನ್ ಪ್ಲಾನ್ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಪ್ರತಿದಿನದ ಅಡುಗೆಯಲ್ಲಿ ಬಳಸುವ ಮಸಾಲೆ ಪದಾರ್ಥಗಳ ಗುಣಮಟ್ಟದ ಕುರಿತು ಈ ಬೆಳವಣಿಗೆ ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಬ್ರ್ಯಾಂಡ್ ಹೆಸರಿನ ಆಧಾರದ ಮೇಲೆ ಮಾತ್ರ ಉತ್ಪನ್ನ ಖರೀದಿಸುವ ಬದಲು ಪ್ಯಾಕಿಂಗ್, FSSAI ವಿವರ, ಬ್ಯಾಚ್ ಸಂಖ್ಯೆ ಹಾಗೂ ಗುಣಮಟ್ಟದ ಮಾಹಿತಿಯನ್ನು ಪರಿಶೀಲಿಸಿ ಖರೀದಿಸುವುದು ಅಗತ್ಯ ಎಂಬ ಸಂದೇಶವನ್ನೂ ಈ ಪ್ರಕರಣ ನೀಡಿದೆ.















