ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಬ್ಯಾಂಕ್ ಅಫ್ ಬರೋಡಾದಿಂದ ಜಾಗರೂಕತಾ ಸಪ್ತಾಹ

ಮಂಗಳೂರು: ಸೆಂಟ್ರಲ್ ವಿಜಿಲೆನ್ಸ್ ಆಯೋಗದ ನಿರ್ದೇಶನದಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯವು ಅಕ್ಟೋಬರ್ 31 ರಿಂದ ನವೆಂಬರ್ 06 ರವರೆಗೆ ವಿಜಿಲೆನ್ಸ್ ಜಾಗೃತಿ ಸಪ್ತಾಹವನ್ನು ಆಚರಿಸುತ್ತಿದೆ. ಈ ಸಂಬಂಧವಾಗಿ ನ.06 ರವರೆಗೆ ಬ್ಯಾಂಕ್‌ ನ ಎಲ್ಲಾ ಪಾಲುದಾರರೊಡಗೂಡಿ ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತು ಅದರ ವಿರುದ್ಧ ಹೋರಾಡಲು ವಿವಿಧ ಚಟುವಟಿಕೆಗಳನ್ನು ನಡೆಸಬೇಕಾಗಿದ್ದು, ಕಾರ್ಯಕ್ರಮದ ಅಂಗವಾಗಿ ಆದಿತ್ಯವಾರ ಮಂಗಳೂರಿನ ಪೊಲೀಸ್ ಉಪ ಆಯುಕ್ತ ಅಂಶು ಕುಮಾರ್ ರವರು ವಿಜಯ ಟವರ್ಸ್ ಜ್ಯೋತಿ ವೃತ್ತದಿಂದ ಸುಲ್ತಾನ್ ಬತ್ತೇರಿವರೆಗಿನ ಬ್ಯಾಂಕ್ ಸಿಬ್ಬಂದಿಗಳ ಬೈಕ್ ಜಾಥಾಗೆ ಚಾಲನೆ ನೀಡಿದರು.

ಬ್ಯಾಂಕ್ ಆಫ್ ಬರೋಡಾದ ಮಂಗಳೂರು ವಲಯದ ಡಿಜಿಎಂ ಮತ್ತು ಉಪ ವಲಯ ಮುಖ್ಯಸ್ಥ ಆರ್.ಗೋಪಾಲಕೃಷ್ಣರವರು ವಿಜಯ ಟವರ್ಸ್ ಜ್ಯೋತಿ ವೃತ್ತದಿಂದ ಎ.ಬಿ ಶೆಟ್ಟಿ ವೃತ್ತದವರೆಗಿನ ಸಿಬ್ಬಂದಿಗಳ ಜಾಗೃತಿ ನಡಿಗೆಗೆ ಚಾಲನೆ ನೀಡಿದರು.

ಶ್ರೀಮತಿ ಗೀತಾ ಕುಲಕರ್ಣಿ, ಕೆಎಸ್‌ಪಿಎಸ್, ಎಸಿಪಿ, ಸಂಚಾರ, ಮಂಗಳೂರು, ಶ್ರೀ ವಿನಯ್ ಗುಪ್ತಾ, ನೆಟ್‌ವರ್ಕ್ ಡಿಜಿಎಂ, ದೇವಿಪ್ರಸಾದ್ ಶೆಟ್ಟಿ, ಪ್ರಾದೇಶಿಕ ವ್ಯವಸ್ಥಾಪಕರು, ಡಿ.ಎಸ್.ಸಿ ಪ್ರಸಾದ್, ವಲಯ ವಿಜಿಲೆನ್ಸ್ ಮುಖ್ಯಸ್ಥರು ಮತ್ತು ಅವರ ತಂಡ ಮತ್ತು ಸಿಬ್ಬಂದಿ ಸದಸ್ಯರು ಉಪಸ್ಥಿತರಿದ್ದರು.

“ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ” ಎಂಬ ಶೀರ್ಷಿಕೆಯಡಿಯಲ್ಲಿ ಬ್ಯಾಂಕ್‌ನ ಮಂಗಳೂರು ವಲಯ ಕಚೇರಿಯು ತನ್ನ 7 ಪ್ರಾದೇಶಿಕ ಕಚೇರಿಗಳು ಮತ್ತು ಕರ್ನಾಟಕದ 21 ಜಿಲ್ಲೆಗಳ 384 ಶಾಖೆಗಳೊಂದಿಗೆ ಜಾಗರೂಕತಾ ಜಾಗೃತಿ ಸಪ್ತಾಹವನ್ನು ಆಚರಿಸುತ್ತಿದೆ. ವಾಕಥಾನ್ ಮತ್ತು ಬೈಕ್ ಜಾಥಾ ಭ್ರಷ್ಟಾಚಾರದ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತವನ್ನು ರಚಿಸುವಲ್ಲಿ ಜನರ ಪ್ರಾಮುಖ್ಯತೆ ಮತ್ತು ಪಾತ್ರವನ್ನು ತಿಳಿಸಲು ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸುಲ್ತಾನ್ ಬತ್ತೇರಿಯಲ್ಲಿರುವ ಉದ್ಯಾನವನದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯ ಕೈಗೊಂಡರು.

ಬ್ಯಾಂಕ್‌ನ ಮಂಗಳೂರು ವಲಯವು ಸಂಪೂರ್ಣ ಜಾಗರೂಕತಾ ಜಾಗೃತಿ ಸಪ್ತಾಹದಲ್ಲಿ ಗ್ರಾಮ ಸಭೆಗಳು, ಪ್ರಬಂಧ ಸ್ಪರ್ಧೆ, ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ದೇಶಭಕ್ತಿ ಗೀತೆ ಗಾಯನ, ರಂಗೋಲಿ ಸ್ಪರ್ಧೆ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.