ಹೊಸದಿಲ್ಲಿ: ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳ ಪೈಕಿ ಬ್ಯಾಂಕ್ ವಿಲೀನ ಪ್ರಕ್ರಿಯೆಯೂ ಸೇರಿದೆ.
ಹೀಗಾಗಿ, ಸಾರ್ವಜನಿಕ ವಲಯದ ಬ್ಯಾಂಕ್’ಗಳ ವಿಲೀನದಿಂದ ಒಂದೇ ಒಂದು ಉದ್ಯೋಗವೂ ನಷ್ಟವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಈ ಕ್ರಮದಿಂದ ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸ ಕಳೆದಕೊಳ್ಳುವ ಭಯ ಕಾಡುತ್ತಿದ್ದು, ಬ್ಯಾಂಕ್’ಗಳ ವಿಲೀನದಿಂದ ಉದ್ಯೋಗ ನಷ್ಟವಾಗುವುದಿಲ್ಲ. ಯಾವ ಉದ್ಯೋಗಿಯನ್ನೂ ಮನೆಗೆ ಕಳುಹಿಸುವುದಿಲ್ಲ ಎಂದು ವಿತ್ತ ಸಚಿವೆ ಭರವಸೆ ನೀಡಿದ್ದಾರೆ.
ಈ ಹಿಂದೆ ಬ್ಯಾಂಕ್ ಆಫ್ ಬರೋಡಾ, ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ವಿಲೀನವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ವಿಲೀನದ ಬಳಿಕ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿಲ್ಲ, ಹೀಗಾಗಿ, ಈಗ 10 ಬ್ಯಾಂಕ್ ವಿಲೀನದ ಬಳಿಕ ಹೊರ ಹೊಮ್ಮುವ 4 ಬ್ಯಾಂಕ್ ಗಳ ಉದ್ಯೋಗಿಗಳು ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಭೀತಿ ಬೇಡ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.












