2 ವರ್ಷ 7 ತಿಂಗಳಲ್ಲಿ ಮಹಿಳೆಯರು,ಮಕ್ಕಳ ಮೇಲಿನ ದೌರ್ಜನ್ಯ: ಒಟ್ಟು 43,052 ಪ್ರಕರಣ

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಹಲವು ಕಾನೂನುಗಳು ಇದ್ದರೂ, ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಎರಡು ವರ್ಷ, ಏಳು ತಿಂಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ 43,053 ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.

2023 ರಿಂದ 2025ರ ಜುಲೈ ಅವಧಿಯಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ ಹಾಗೂ ಸಾವು, ಗಂಡನಿಂದ ಕಿರುಕುಳ, ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012), ಬಾಲ್ಯ ವಿವಾಹ, ಬಾಲ ಕಾರ್ಮಿಕ, ಮಕ್ಕಳ ರಕ್ಷಣೆ ಮತ್ತು ಆರೈಕೆ ಕಾಯ್ದೆ (ಜೆ.ಜೆ.ಕಾಯ್ದೆ) ಅಡಿ 43 ಸಾವಿರಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯೇ ಅಧಿಕವಾಗಿದೆ.

ಕೆಲಸದ ಸ್ಥಳ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದಕ್ಕೆ ಸಂಬಂಧಿಸಿದಂತೆ 16,273 ಪ್ರಕರಣಗಳು ದಾಖಲಾಗಿವೆ. ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಒಟ್ಟು 5,456 ಪ್ರಕರಣಗಳು ದಾಖಲಾಗಿದ್ದು, ವರದಕ್ಷಿಣೆ ಕಿರುಕುಳದಿಂದಲೇ 340 ಗೃಹಿಣಿಯರು ಮೃತಪಟ್ಟಿದ್ದಾರೆ. ಗಂಡನ ಕಿರುಕುಳಕ್ಕೆ ಸಂಬಂಧಿಸಿದಂತೆ 7,546 ಪ್ರಕರಣಗಳು ದಾಖಲಾಗಿವೆ ಎಂಬುದು ಪೊಲೀಸ್‌ ಇಲಾಖೆಯ ಅಂಕಿ–ಅಂಶಗಳಿಂದ ಗೊತ್ತಾಗಿದೆ.

ಅತ್ಯಾಚಾರ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. 2023ರಲ್ಲಿ 600, 2024ರಲ್ಲಿ 739 ಹಾಗೂ 2025ರ ಜುಲೈವರೆಗೆ 549 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪೋಕ್ಸೊ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, 2023ರಲ್ಲಿ 3,902, 2024ರಲ್ಲಿ 4,064 ಹಾಗೂ 2025ರ ಜುಲೈವರೆಗೆ 2,544 ಪ್ರಕರಣಗಳು ದಾಖಲಾಗಿವೆ.