ಟ್ರಾಫಿಕ್‌ ನಿಯಮ ಉಲ್ಲಂಘನೆ: ದಂಡಕ್ಕೆ ಶೇ.50ರಷ್ಟು ರಿಯಾಯತಿ!

ಬೆಂಗಳೂರು: ರಾಜ್ಯ ಸರ್ಕಾರ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಮತ್ತೊಮ್ಮೆ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50 ರಷ್ಟು ರಿಯಾಯಿತಿ ಘೋಷಿಸಿ ಆದೇಶಿಸಿದೆ.

ಈ ಹಿಂದೆ ಶೇ. 50ರಷ್ಟು ರಿಯಾಯಿತಿ ನೀಡಿ ಭಾರಿ ಮೊತ್ತದ ದಂಡ ಸಂಗ್ರಹಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಮ್ಮೆ ರಿಯಾಯಿತಿ ಘೋಷಣೆ ಮಾಡಿದ್ದು, ಆಗಸ್ಟ್ 23 ರಿಂದ ಸೆಪ್ಟೆಂಬರ್ 9ರವರೆಗೆ ದಂಡದ ಅರ್ಧದಷ್ಟು ಹಣ ಪಾವತಿಸಲು ವಾಹನ ಸವಾರರಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಅಧಿಕೃತ ಆದೇಶ ಹೊರಡಿಸಿದ್ದು, ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರವರೆಗೆ ಶೇ. 50 ರಷ್ಟು ದಂಡ ಪಾವತಿ ಮಾಡಲು ಅವಕಾಶ ನೀಡಲಾಗಿದೆ. ಪೊಲೀಸ್‌ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ 2023ರ ಫೆಬ್ರವರಿ 11ರ ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ, ಮತ್ತೊಮ್ಮೆ ಶೇ. 50 ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬಹಳ ವರ್ಷಗಳಿಂದ ಟ್ರಾಫಿಕ್ ದಂಡ ಕಟ್ಟದೇ ಹಾಗೇ ಬಾಕಿ ಉಳಿಸಿಕೊಂಡವರಿಗೆ ಈ ಆಫರ್ ನೀಡಲಾಗಿದೆ. ಇನ್ನುಳಿದಂತೆ 2023ರ ಫೆಬ್ರವರಿ 12ರ ನಂತರದ ಕೇಸ್​ ಗಳಿಗೆ ಮುಂದಿನ ವರ್ಷ ಆಫರ್ ನೀಡುವ ಸಾಧ್ಯತೆಗಳಿವೆ.