ಬೆಂಗಳೂರು: ದೇಶದ ಅತಿದೊಡ್ಡ ಐ.ಟಿ ಸೇವಾ ಪೂರೈಕೆದಾರ ಕಂಪನಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಪ್ರಸಕ್ತ ಆರ್ಥಿಕ ವರ್ಷದಲ್ಲಿ 12 ಸಾವಿರಕ್ಕೂ (ಶೇ 2ರಷ್ಟು) ಹೆಚ್ಚು ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ.
ಪ್ರಸಕ್ತ ವರ್ಷದ ಜೂನ್ 30ರಂದು ಕಂಪನಿಯು ಜಾಗತಿಕವಾಗಿ 6,13,069 ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಅಂದಾಜು 12,261 ಉದ್ಯೋಗಿಗಳನ್ನು ಕಡಿತಗೊಳಿಸಲಿದೆ. ಹಿರಿಯ ಮತ್ತು ಮಧ್ಯಮ ಶ್ರೇಣಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳ ಮೇಲೆ ಇದು ಹೆಚ್ಚು ಪರಿಣಾಮ ಬೀರಲಿದೆ ಎಂದು ಟಿಸಿಎಸ್ ಭಾನುವಾರ ತಿಳಿಸಿದೆ. ಜೂನ್ ತ್ರೈಮಾಸಿಕದಲ್ಲಿ ಕಂಪನಿಯು 5 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು.
ಹೊಸ ತಂತ್ರಜ್ಞಾನದಲ್ಲಿನ ಹೂಡಿಕೆಗಳು, ಕೃತಕ ಬುದ್ಧಿಮತ್ತೆ ನಿಯೋಜನೆ, ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಕಂಪನಿಯು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು ಉದ್ದೇಶಿಸಿದೆ. ಅಲ್ಲದೆ, ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸುತ್ತಿದ್ದೇವೆ. ಇದರ ಭಾಗವಾಗಿ ಉದ್ಯೋಗ ಕಡಿತದ ನಿರ್ಧಾರ ಕೈಗೊಳ್ಳಲಾಗಿದೆ. ಈ ಕಡಿತವು ಗ್ರಾಹಕರಿಗೆ ಒದಗಿಸುವ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ಪುನರ್‌ರಚನೆ ಮಾಡಲಾಗುವುದು. ಉದ್ಯೋಗ ಕಳೆದುಕೊಳ್ಳುವವರಿಗೆ ಸೂಕ್ತ ಪ್ರಯೋಜನ, ನೆರವು ನೀಡಲಾಗುವುದು ಎಂದು ತಿಳಿಸಿದೆ.
ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಯೋಜನೆಗಳ ಆರಂಭದಲ್ಲಿ ವಿಳಂಬವಾಗುತ್ತಿದೆ. ಜಾಗತಿಕ ಅರ್ಥ ವ್ಯವಸ್ಥೆಯಲ್ಲಿರುವ ಅನಿಶ್ಚಿತ ಸ್ಥಿತಿ ಹಾಗೂ ಜಾಗತಿಕ ಮಟ್ಟದಲ್ಲಿನ ಬಿಕ್ಕಟ್ಟುಗಳ ಕಾರಣದಿಂದಾಗಿ ಬೇಡಿಕೆ ತಗ್ಗಿದೆ ಎಂದು ಟಿಸಿಎಸ್‌ನ ಸಿಇಒ ಕೆ.ಕೃತಿವಾಸನ್ ಇತ್ತೀಚೆಗೆ ಹೇಳಿದ್ದರು.
‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ವಲಯದ ಮೇಲೆ ಪರಿಣಾಮ ಬೀರಿದೆ. ಇದೇ ಉದ್ಯೋಗ ಕಡಿತಕ್ಕೆ ಕಾರಣವಾಗಿದೆ’ ಎಂದು ಐ.ಟಿ ಸಲಹಾ ಸಂಸ್ಥೆ ಎಚ್‌ಎಫ್‌ಎಸ್ ರಿಸರ್ಚ್‌ನ ಸಿಇಒ ಫಿಲ್ ಫರ್ಶ್ಟ್ ಹೇಳಿದ್ದಾರೆ.
ಬೇಡಿಕೆಯಲ್ಲಿ ಇಳಿಕೆ, ನಿರಂತರ ಹಣದುಬ್ಬರ ಮತ್ತು ಅಮೆರಿಕದ ವ್ಯಾಪಾರ ನೀತಿಗಳ ಮೇಲಿನ ಮುಂದುವರಿದ ಅನಿಶ್ಚಿತ ಸ್ಥಿತಿಯೂ ಮಾಹಿತಿ ತಂತ್ರಜ್ಞಾನ ವಲಯದ ಮೇಲೆ ಪರಿಣಾಮ ಬೀರುತ್ತಿದೆ..












