ಬೆಂಗಳೂರು: ಆರ್ ಸಿಬಿಯ ಚೊಚ್ಚಲ ಐತಿಹಾಸಿಕ ಗೆಲುವಿಗೆ ಸಿಎಂ ಸಿದ್ದರಾಮಯ್ಯ ಆದಿಯಾಗಿ ಸಚಿವರು ಅಭಿನಂದನೆಗಳ ಮಹಾಪಪೂರದೊಂದಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಎಕ್ಸ್ ಪೋಸ್ಟ್ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಸೇರಿ ಸಚಿವರುಗಳು ಐಪಿಎಲ್ ಚಾಂಪಿಯನ್ ಆರ್ ಸಿಬಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಟ್ಯಾಬ್ನಲ್ಲೇ ಪಂದ್ಯ ವೀಕ್ಷಿಸಿದ ಸಿಎಂ: ಸಿಎಂ ಸಿದ್ದರಾಮಯ್ಯ ಅವರು ಗದಗ ಜಿಲ್ಲಾ ಪ್ರವಾಸ ಮುಗಿಸಿ ಬರುತ್ತಿದ್ದಂತೆ ಬೆಂಗಳೂರು ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ಟ್ಯಾಬ್ ನಲ್ಲೇ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದರು. ಆರ್ ಸಿಬಿ ಗೆಲುವು ಸಾಧಿಸುತ್ತಿದ್ದಂತೆ, ಎಕ್ಸ್ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಐತಿಹಾಸಿಕ ಐಪಿಎಲ್ ಗೆಲುವಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಅಭಿನಂದನೆಗಳು. ಅಂತಿಮವಾಗಿ ಕನಸು ನನಸಾಗಿದೆ. ಈ ಸಲ ಕಪ್ ನಮ್ಮದೇ. ಈ ಗೆಲುವು ಕರ್ನಾಟಕ ಹಾಗೂ ವಿಶ್ವದಾದ್ಯಂತದ ಅಭಿಮಾನಿಗಳನ್ನು ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್ಸಿಬಿಯ ಹುಡುಗರು ನನಸಾಗಿಸಿದ್ದಾರೆ. ಆರ್ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ಇತಿಹಾಸ ಸೃಷ್ಟಿಸಿದ ದಿನ. ಕೊನೆಯದಾಗಿ, ಈ ಸಲ ಕಪ್ ನಮ್ದೆ ಎಂದು ಸಂತೋಷ ಹೊರಹಾಕಿದ್ದಾರೆ.
ಡಿಸಿಎಂ ಡಿ ಕೆ ಶಿವಕುಮಾರ್ ಅಭಿನಂದನೆ: ಇತ್ತ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. 18 ವರ್ಷಗಳ ಕನಸು ನನಸು ಮಾಡಿದ ಆರ್ ಸಿ ಬಿ ತಂಡಕ್ಕೆ ಹೃತ್ಪೂರ್ವಕ ಶುಭಾಶಯ ತಿಳಿಸಿರುವ ಡಿ ಕೆ ಶಿವಕುಮಾರ್ ಅವರು, “ಈ ಸಲ ಕಪ್ ನಮ್ದೇ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಟಿವಿ ಪರದೆ ಮೂಲಕ ಪಂದ್ಯ ವೀಕ್ಷಿಸಿದ ಡಿಸಿಎಂ ಅವರು ಆರ್ ಸಿ ಬಿ ಗೆಲ್ಲುತ್ತಿದ್ದಂತೆ ಸಂಭ್ರಮ ಆಚರಿಸಿದರು. ಈ ಒಂದು ಶುಭ ದಿನ, ಶುಭ ಘಳಿಗೆಗಾಗಿ ಇಡೀ ಕರ್ನಾಟಕ ಹಂಬಲಿಸಿತ್ತು. ಇದನ್ನು ಸಾಕಾರಗೊಳಿಸಿದ ರಜತ್ ಪಟೀದಾರ್ ಹಾಗೂ ವಿರಾಟ್ ಕೊಹ್ಲಿ ಅವರ ತಂಡಕ್ಕೆ ಮಾಧ್ಯಮ ಹೇಳಿಕೆಯಲ್ಲಿ ಶುಭ ಹಾರೈಸಿದ್ದಾರೆ.
ಸಚಿವ ಕೃಷ್ಣ ಬೈರೇಗೌಡ ಅಭಿನಂದನೆ ಸಲ್ಲಿಸುತ್ತಾ, ಹಲವು ವರ್ಷಗಳ ನಿರೀಕ್ಷೆ, ಹೃದಯ ಬಡಿತ ಮತ್ತು ಅಚಲ ನಂಬಿಕೆ ಬಳಿಕ ಕಾಯುವಿಕೆ ಅಂತ್ಯವಾಗಿದೆ. ಆರ್ ಸಿಬಿ 2025 ಐಪಿಎಲ್ ಚಾಂಪಿಯನ್ ಆಗಿದ್ದಾರೆ. ಈ ಜಯಭೇರಿ ಕೇವಲ ಆಟಗಾರರಿಗೆ ಮಾತ್ರವಲ್ಲ, ಪ್ರತಿಯೊಬ್ಬ ಅಭಿಮಾನಿ ಬಳಗಕ್ಕೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಕ್ಸ್ ಪೋಸ್ಟ್ ಮೂಲಕ ಅಭಿನಂದನೆ ಸಲ್ಲಿಸುತ್ತಾ, ಹ್ಯಾಟ್ಸ್ ಆಫ್ ಆರ್ ಸಿಬಿ. ಸುದೀರ್ಘ ಕಾಯವಿಕೆ ಅಂತ್ಯವಾಗಿದೆ. ಈ ಸಲ ಕಪ್ ನಮ್ದು. ಈ ಗೆಲುವು ಕರ್ನಾಟಕದ ಹೆಮ್ಮೆಯನ್ನು ದ್ವಿಗುಣಗೊಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












