ಈ ವರುಷ ಟಾಟಾ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಪ್ಲೇಆಫ್‌ಗೇರಲು ತುದಿಗಾಲಿನಲ್ಲಿ ನಿಂತಿದೆ. ಇದುವರೆಗೆ ಆಡಿರುವ 11 ಪಂದ್ಯಗಳ ಪೈಕಿ 8 ಪಂದ್ಯಗಳನ್ನು ಗೆದ್ದು 3 ಪಂದ್ಯಗಳಲ್ಲಿ ಸೋತಿರುವ ಆರ್‌ಸಿಬಿ 16 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ 2ನೇ ಸ್ಥಾನದಲ್ಲಿದೆ. ಇದೀಗ ಪ್ಲೇಆಫ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕೆಂದರೆ ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಶತಾಯಗತಾಯ ಗೆಲ್ಲಲೇಬೇಕಿದೆ. ಆದರೆ ಈ ನಡುವೆ ತಂಡಕ್ಕೆ ಆಘಾತಕ್ಕಾರಿ ಸುದ್ದಿಯೊಂದು ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್ ದೇವದತ್ ಪಡಿಕ್ಕಲ್ ಇಂಜುರಿಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಯಾಗಿ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಆರ್‌ಸಿಬಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದೆ.
ಆರ್ಸಿಬಿಗೆ ಆಟಗಾರರಿಗೆ ಇಂಜುರಿ ಸಮಸ್ಯೆ:
ಪ್ಲೇ ಆಫ್ ಸನಿಹವಾಗುತ್ತಿರುವಾಗ ಆರ್ಸಿಬಿಗೆ ಆಟಗಾರರ ಇಂಜುರಿ ಸಮಸ್ಯೆ ಬೆಂಬಿಡದಂತೆ ಕಾಡುತ್ತಿದೆ. ಈ ಮೊದಲು ಆರಂಭಿಕ ಆಟಗಾರ ಫಿಲ್ ಸಾಲ್ಟ್ ಜ್ವರದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ. ಪ್ರಮುಖ ವೇಗಿ ಜೋಶ್ ಹೇಜಲ್ವುಡ್ ಕೂಡ ಗಾಯಕ್ಕೆ ತುತ್ತಾಗಿದ್ದು, ಅವರು ಕೂಡ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಇದರ ಜೊತೆಗೆ ನಾಯಕ ರಜತ್ ಪಾಟಿದರ್ ಕೂಡ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಇದರ ಜೊತೆಗೆ ಇದೀಗ ತಂಡದ ಬ್ಯಾಟರ್ ದೇವದತ್ ಪಡಿಕ್ಕಲ್ ಇಂಜುರಿಯಿಂದಾಗಿ ಇಡೀ ಟೂರ್ನಿಯಿಂದ ಹೊರಬಿದ್ದಿರುವುದು ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ದೇವದತ್ ಪಡಿಕ್ಕಲ್ ಅವರು ಮಂಡಿರಜ್ಜು ಗಾಯದಿಂದಾಗಿ ಬಳಲುತ್ತಿರುವ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರೆ ಈ ಸೀಸನ್ನಲ್ಲಿ ಪಡಿಕ್ಕಲ್ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಆಡಿರುವ 10 ಪಂದ್ಯಗಳಲ್ಲಿ ಪಡಿಕ್ಕಲ್ 247 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ್ದ ಪಡಿಕ್ಕಲ್, ಐಪಿಎಲ್ 2025 ರಲ್ಲಿ ಮೂರನೇ ಸ್ಥಾನದಲ್ಲಿ ಆರ್‌ಸಿಬಿ ಪರ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಅವರನ್ನು ಪಂದ್ಯಾವಳಿಯಿಂದ ಹೊರಗಿಡುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗುತ್ತಿದೆ.












