ಮಹಿಳಾ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 204 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ್ದ ಆರ್ಸಿಬಿ ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವೋಲ್ ಅವರ ಬ್ಯಾಟಿಂಗ್ ಬಲದಿಂದ 19.4 ಓವರ್ಗಳಲ್ಲಿ 6 ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದರೊಂದಿಗೆ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಈ ಹಿಂದೆ 2024ರಲ್ಲಿ ಇದೇ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಚಾಂಪಿಯನ್ ಆಗಿತ್ತು. ಇದೀಗ ಎರಡನೇ ಸಲವೂ ಡೆಲ್ಲಿ ತಂಡವನ್ನು ಸೋಲಿಸಿದೆ. ಇನ್ನು ಕ್ಯಾಪಿಟಲ್ಸ್ ತಂಡ ಸತತ ನಾಲ್ಕನೇ ಸಲು ಫೈನಲ್ಗೆ ತಲುಪಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ.

ವಡೋದರದ ಕೊಟಂಬಿ ಮೈದಾನದಲ್ಲಿ ನಡೆದಿದ್ದ ರಣರೋಚಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕಿ ಜೆಮಿಮಾ ರೊಡ್ರಿಗಸ್ 37 ಎಸೆತಗಳಲ್ಲಿ ಎಂಟು ಬೌಂಡರಿ ಸೇರಿದಂತೆ 57 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಲಾರಾ ವೋಲ್ವಾರ್ಡ್ಟ್ 25 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿದಂತೆ 44 ರನ್ ಗಳಿಸಿದರು.

ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಲಿಜೆಲ್ಲೆ ಲೀ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಲೀ 30 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 37 ರನ್ ಗಳಿಸಿದರು. ಚಿನೆಲ್ಲೆ ಹೆನ್ರಿ ಕೇವಲ 15 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ ಅಜೇಯ 35 ರನ್ ಗಳಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ನಾಡಿನ್ ಡಿ ಕ್ಲರ್ಕ್, ಸಯಾಲಿ ಸತ್‌ಘರೆ ಮತ್ತು ಅರುಂಧತಿ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು.
ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡ ಕಳಪೆ ಆರಂಭ ಪಡೆದುಕೊಂಡಿತು. ಗ್ರೇಸ್ ಹ್ಯಾರಿಸ್ 9 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಹ್ಯಾರಿಸ್ ಅವರನ್ನು ಚಿನೆಲ್ಲೆ ಹೆನ್ರಿ ಔಟ್ ಮಾಡಿದರು. ಈ ವೇಳೆ ಎರಡನೇ ವಿಕೆಟ್‌ಗೆ ಜೊತೆಯಾದ ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವಾಲ್ ಅದ್ಭುತ ಪ್ರದರ್ಶನ ನೀಡಿದರು. ವಾಲ್ ಮತ್ತು ಸ್ಮೃತಿ ಎರಡನೇ ವಿಕೆಟ್‌ಗೆ 92 ಎಸೆತಗಳಲ್ಲಿ 165 ರನ್‌ಗಳ ಜೊತೆಯಾಟವಾಡಿ ಪಂದ್ಯವನ್ನು ತಮ್ಮಡೆಗೆ ತಿರುಗಿಸಿದರು. ವಾಲ್ 54 ಎಸೆತಗಳಲ್ಲಿ 79 ರನ್ ಗಳಿಸಿದರು ಇದರಲ್ಲಿ 14 ಬೌಂಡರಿಗಳು ಸೇರಿದ್ದವು. ವಾಲ್ ಔಟಾದ ನಂತರ, ರಿಚಾ ಘೋಷ್ ಕ್ರೀಸ್‌ಗೆ ಬಂದರು, ಆದರೆ ಅವರು ಕೇವಲ 6 ರನ್ ಗಳಿಸಿ ಔಟಾದರು.
ಈ ವೇಳೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಜವಾಬ್ದಾರಿ ಮಂಧಾನ ಅವರ ಮೇಲೆ ಬಿತ್ತು, ಆದರೆ ಇದು ಸಾಧ್ಯವಾಗಲಿಲ್ಲ. ಸ್ಮೃತಿ 41 ಎಸೆತಗಳಲ್ಲಿ 12 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 87 ರನ್ ಗಳಿಸಿ ನಿರ್ಗಮಿಸಿದರು. ಕೊನೆಯ ಓವರ್‌ನಲ್ಲಿ ಆರ್ಸಿಬಿ ಗೆಲ್ಲಲು 10 ರನ್‌ಗಳು ಬೇಕಾಗಿದ್ದವು. ಆ ಓವರ್‌ನ ಮೊದಲ ಎಸೆತದಲ್ಲಿ ರಾಧಾ ಯಾದವ್ ಒಂದು ಸಿಂಗಲ್ ಪಡೆದರು. ನಂತರ ನಾಡಿನ್ ಡಿ ಕ್ಲರ್ಕ್ ಒಂದು ಸಿಂಗಲ್ ಗಳಿಸಿದರು. ನಂತರ ರಾಧಾ ಯಾದವ್ ಸತತ ಎರಡು ಬೌಂಡರಿ ಬಾರಿಸಿ ಆರ್‌ಸಿಬಿಗೆ ಗೆಲುವು ತಂದು ಕೊಟ್ಟರು.
















