ಚಪ್ಪಲಿಯೊಳಗೆ ಅಡಗಿದ್ದ ಹಾವು ಕಚ್ಚಿ ಸಾಫ್ಟ್‌ವೇರ್ ಎಂಜಿನಿಯರ್ ಮೃತ್ಯು!

ಬೆಂಗಳೂರು: ಬನ್ನೇರುಘಟ್ಟದಲ್ಲಿ ಚಪ್ಪಲಿಯೊಳಗೆ ಅಡಗಿದ್ದ ಕೊಳಕು ಮಂಡಲ ಹಾವು ಕಚ್ಚಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಬನ್ನೇರುಘಟ್ಟದ ​​ರಂಗನಾಥ ಲೇಔಟ್ ನಿವಾಸಿ ಮಂಜು ಪ್ರಕಾಶ್ (41) ಎಂದು ಗುರುತಿಸಲಾಗಿದೆ. ಇವರು ಟಿಸಿಎಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಇವರು ಕಬ್ಬಿನ ಜ್ಯೂಸ್​​ ಕುಡಿದು ಮಧ್ಯಾಹ್ನ 12.45 ರ ಸುಮಾರಿಗೆ ಕ್ರೋಕ್ಸ್ ಧರಿಸಿ ಮನೆಗೆ ಹಿಂದಿರುಗಿದ್ದರು. ಕೋಣೆಯ ಹೊರಗೆ ತನ್ನ ಕ್ರೋಕ್ಸ್ ತೆಗೆದು ಒಳಗೆ ವಿಶ್ರಾಂತಿ ಪಡೆಯಲು ಹೋದರು. ಕ್ರೋಕ್ಸ್ ಬಳಿ ಸತ್ತ ಹಾವು ಇರುವುದನ್ನು ಕುಟುಂಬ ಸದಸ್ಯರು ತಿಳಿದುಕೊಂಡರು. ಇದರೊಂದಿಗೆ, ಮಂಜು ಪ್ರಕಾಶ್ ಅವರನ್ನು ಹಾವು ಕಚ್ಚಿರುವುದು ಕಂಡುಬಂದಿದೆ. ಹಾಸಿಗೆಯ ಮೇಲೆ ಮಲಗಿ, ಬಾಯಿಯಿಂದ ನೊರೆ ಬರುತ್ತಿರುವುದನ್ನು ಮತ್ತು ಕಾಲಿನಿಂದ ರಕ್ತ ಸೋರುತ್ತಿರುವುದನ್ನು ನೋಡಿದರು.

ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು, ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಅವರು ಹಿಂದೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದರು. ಇದರಿಂದಾಗಿ ಅವರ ಕಾಲು ಮರಗಟ್ಟಿತ್ತು. ಹೀಗಾಗಿ ಹಾವು ಕಚ್ಚಿದಾಗ ಅವರಿಗೆ ನೋವು ಅನುಭವಿಸದೇ ಇರಬಹುದು, ಇದರಿಂದಾಗಿ ಅವರು ವೈದ್ಯಕೀಯ ಸಹಾಯವನ್ನು ಪಡೆಯಲಿಲ್ಲ ಎನ್ನಲಾಗಿದೆ.