ಬೆಂಗಳೂರು ಆಗಮಿಸಲಿರುವ 2026ರ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಕೌಂಟ್‌ಡೌನ್ ಶುರುವಾಗಿರುವ ಬೆನ್ನಲ್ಲೇ ಬೆಂಗಳೂರು ಪೊಲೀಸರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಗೋವಾದ ಪಬ್ ಒಂದರಲ್ಲಿ ಇತ್ತೀಚೆಗೆ ಸಂಭವಿಸಿದ ದುರ್ಘಟನೆಯ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಪೊಲೀಸರು, ಡಿ.31ರಂದು ನಡೆಯಲಿರುವ ಹೊಸ ವರ್ಷಾಚರಣೆಯ ಕಾರ್ಯಕ್ರಮಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್‌ಗಳು ಸೇರಿದಂತೆ ಕಾರ್ಯಕ್ರಮಗಳನ್ನು ಆಯೋಜಿಸುವ ಎಲ್ಲಾ ಸ್ಥಳಗಳಿಗೆ ಈ ಗೈಡ್‌ಲೈನ್ಸ್‌ಗಳು ಅನ್ವಯವಾಗಲಿವೆ.
19 ಕಟ್ಟುನಿಟ್ಟಿನ ರೂಲ್ಸ್
ಬೆಂಗಳೂರು ನಗರ ಪೊಲೀಸರು ಸುಮಾರು 19 ಅಂಶಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಪ್ರಮುಖವಾಗಿ ಕಾರ್ಯಕ್ರಮ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಗೋವಾ ಪಬ್ ದುರಂತದ ನಂತರ ಮತ್ತಷ್ಟು ಬಿಗಿ ಕ್ರಮಗಳನ್ನು ಜಾರಿಗೆ ತರಲು ಖಾಕಿ ಪಡೆ ಮುಂದಾಗಿದೆ.
ಅನುಮತಿ ಕಡ್ಡಾಯ: ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಕಡ್ಡಾಯ. ಅಲ್ಲದೆ, ಹೊಸ ವರ್ಷಾಚರಣೆಗೆ ನಿಗದಿಪಡಿಸಿದ ಸಮಯ ಮತ್ತು ಶಬ್ದ ಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕು.
ಸ್ಥಳಾವಕಾಶಕ್ಕೆ ತಕ್ಕಂತೆ ಟಿಕೆಟ್/ಪಾಸ್‌ಗಳನ್ನು ವಿತರಿಸಬೇಕು. ನೆಲಮಹಡಿ, ಪಾರ್ಕಿಂಗ್ ಸ್ಥಳ, ಅಥವಾ ಟೆರೆಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.
ತಪಾಸಣೆ ಮತ್ತು ಮಾದಕ ವಸ್ತು ನಿಷೇಧ:
ಕಾರ್ಯಕ್ರಮಕ್ಕೆ ಬರುವವರ ತಪಾಸಣೆ ನಡೆಸಿ, ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಸ್ಥಳದಲ್ಲಿ ಮಾದಕ ವಸ್ತುಗಳ ಬಳಕೆ ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರ ದಾಳಿಯಲ್ಲಿ ಮಾದಕ ವಸ್ತು ಸಿಕ್ಕಿಬಿದ್ದರೆ, ಕಟ್ಟಡದ ಮಾಲೀಕರು/ಮ್ಯಾನೇಜರ್ ವಿರುದ್ಧವೂ ಕೇಸ್ ದಾಖಲಾಗುತ್ತದೆ.
ಅಗ್ನಿ ನಂದಿಸುವ ವಸ್ತುಗಳನ್ನು ಅಳವಡಿಸಬೇಕು ಮತ್ತು ನಿರ್ಗಮನ ದ್ವಾರಗಳು ದೊಡ್ಡದಾಗಿರಬೇಕು.
ಸಿಸಿ ಕ್ಯಾಮೆರಾ ಕಡ್ಡಾಯ:
ಕಾರ್ಯಕ್ರಮದ ಪ್ರತಿ ಜಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಕನಿಷ್ಠ 30 ದಿನಗಳವರೆಗೆ ದೃಶ್ಯಗಳನ್ನು ಸಂಗ್ರಹಿಸಬೇಕು. ಮಹಿಳೆಯರಿರುವ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಖಾಸಗಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಬೇಕು. ಸೆಕ್ಯೂರಿಟಿ ಸಿಬ್ಬಂದಿ ಹಾಗೂ ಬೌನ್ಸರ್‌ಗಳನ್ನು ನಿಯೋಜಿಸಿಕೊಳ್ಳುವ ಏಜೆನ್ಸಿಗಳು ‘PSARA’ ದಲ್ಲಿ ನೊಂದಣಿ ಮಾಡಬೇಕು.
ಅತಿಥಿಗಳ ಮಾಹಿತಿ:
ಸೆಲೆಬ್ರಿಟಿಗಳು, ಡಿಜೆಗಳು, ಅಥವಾ ನಟ-ನಟಿಯರನ್ನು ಆಹ್ವಾನಿಸಿದ್ದಲ್ಲಿ ಅವರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ನೀಡಬೇಕು.
ಲೈಸೆನ್ಸ್ ಇಲ್ಲದ ಔಟ್ ಡೋರ್ ಸ್ಥಳಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶವಿಲ್ಲ. ಹೋಟೆಲ್‌ಗಳ ರೂಮ್‌ಗಳಲ್ಲಿ ಗುಂಪು ಸೇರಿ ನಿಯಮಬಾಹಿರವಾಗಿ ಖಾಸಗಿ ಪಾರ್ಟಿ ನಡೆಸಲು ಅವಕಾಶ ನೀಡಬಾರದು. ಯಾವುದೇ ಅಹಿತಕರ ಘಟನೆ ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.
ಬೆಂಗಳೂರು ಪೊಲೀಸರು ಹೊಸ ವರ್ಷಾಚರಣೆಯ ಕಾರ್ಯಕ್ರಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ನಿಯಮಗಳ ಉಲ್ಲಂಘನೆಯು ಕಠಿಣ ಕಾನೂನು ಕ್ರಮಕ್ಕೆ ಕಾರಣವಾಗಲಿದೆ ಎಂದು ಆಯೋಜಕರಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಲಾಗಿದೆ.
















