ಬೆಂಗಳೂರು: ‘2030ರ ವೇಳೆಗೆ ಬೆಂಗಳೂರು ನಗರದಲ್ಲಿ 220 ಕಿ.ಮೀ ಉದ್ದದ ಮೆಟ್ರೊ ಮಾರ್ಗ ಪೂರ್ಣಗೊಳಿಸಿ, 30 ಲಕ್ಷ ಜನರು ಪ್ರಯಾಣಿಸಲು ಮೂಲಸೌಕರ್ಯ ಕಲ್ಪಿಸುವುದು ನಮ್ಮ ಬದ್ಧತೆಯಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಳದಿ ಮೆಟ್ರೊ ರೈಲು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಮಾತನಾಡಿದರು. ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಹಿತಿ ನೀಡಿದ್ದಾರೆ.
‘ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಿ ಬೆಂಗಳೂರು ನಗರವನ್ನು ಜಾಗತಿಕ ಆಕರ್ಷಣೆಯ ನಗರವಾಗಿಸುವ ನಿಟ್ಟಿನಲ್ಲಿ ಮೆಟ್ರೊ ಯೋಜನೆ ಪ್ರಮುಖ ಹೆಜ್ಜೆಯಾಗಿದ್ದು, ನಮಗೆಲ್ಲರಿಗೂ ಇದು ಹೆಮ್ಮೆಯ ದಿನವಾಗಿದೆ’ ಎಂದಿದ್ದಾರೆ.
‘ಮೆಟ್ರೊ ಹಳದಿ ಮಾರ್ಗದ ಉದ್ಘಾಟನೆಯಿಂದ ಬೆಂಗಳೂರು ಮೆಟ್ರೊ ಒಟ್ಟು 96.10 ಕಿ.ಮೀ ಕಾರ್ಯಾಚರಣೆಯೊಂದಿಗೆ ದಕ್ಷಿಣ ಭಾರತದಲ್ಲಿಯೇ ಅತಿ ಉದ್ದದ ಮೆಟ್ರೊ ಜಾಲದ ಗೌರವಕ್ಕೆ ಪಾತ್ರವಾಗಿದೆ. ಇದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ಕ್ಷಣವಾಗಿದ್ದು, ಅಭಿವೃದ್ಧಿಯ ಕಡೆಗಿನ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ’ ಎಂದು ಉಲ್ಲೇಖಿಸಿದ್ದಾರೆ.
‘ಬೆಂಗಳೂರಿನ ಬೆಳವಣಿಗೆ ಮತ್ತು ರಾಷ್ಟ್ರದ ಅಭಿವೃದ್ಧಿಯ ದೃಷ್ಟಿಯಿಂದ ನಮ್ಮ ಮೆಟ್ರೋಗೆ ಹೆಚ್ಚಿನ ಅನುದಾನಗಳನ್ನು ಒದಗಿಸಬೇಕೆಂದು ವಿನಂತಿಸುತ್ತೇನೆ.
ನಾಗರಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರಸ್ಪರ ಸಹಕಾರ, ಒಕ್ಕೂಟ ವ್ಯವಸ್ಥೆಯ ಬುನಾದಿಯನ್ನು ಇನ್ನಷ್ಟು ಬಲಪಡಿಸುವ ವಿಶ್ವಾಸ ನನಗಿದೆ ಎಂದಿದ್ದಾರೆ.
ಇಂದು ಲೋಕಾರ್ಪಣೆಗೊಂಡಿರುವ ಹಳದಿ ಮೆಟ್ರೊ ರೈಲು ನಗರದ ಪ್ರಮುಖ ಐಟಿ ಮತ್ತು ತಂತ್ರಜ್ಞಾನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ವೃತ್ತಿಪರರಿಗೆ, ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ತ್ವರಿತ ಪ್ರಯಾಣವನ್ನು ಖಾತ್ರಿಪಡಿಸುತ್ತದೆ. ಪ್ರತಿನಿತ್ಯ ಸುಮಾರು 3.5 ಲಕ್ಷ ಪ್ರಯಾಣಿಕರು ಹಳದಿ ಮಾರ್ಗ ಬಳಸುವ ನಿರೀಕ್ಷೆಯಿದೆ. ಇದರಿಂದ ಮುಖ್ಯವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಜಯದೇವ ಆಸ್ಪತ್ರೆ ಸುತ್ತಲಿನ ಭಾರೀ ಟ್ರಾಫಿಕ್ ಸಮಸ್ಯೆ ಸುಧಾರಿಸುವ ವಿಶ್ವಾಸ ಹೊಂದಿದ್ದೇವೆ’ ಎಂದು ತಿಳಿಸಿದ್ದಾರೆ.
‘ಪ್ರತಿದಿನ ಸುಮಾರು 9 ಲಕ್ಷ ಪ್ರಯಾಣಿಕರು ಬೆಂಗಳೂರು ಮೆಟ್ರೊ ಸೇವೆ ಬಳಸುತ್ತಿದ್ದಾರೆ. ಹಳದಿ ಮಾರ್ಗ ಸೇರ್ಪಡೆಯಿಂದ ಪ್ರಯಾಣಿಕರ ಸಂಖ್ಯೆ 12.5 ಲಕ್ಷ ದಾಟುವ ನಿರೀಕ್ಷೆ ಹೊಂದಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
‘ಬೆಂಗಳೂರು ಮೆಟ್ರೊ ಹಾದಿಯಲ್ಲಿ ನಾವು ಸಾಗಬೇಕಾದ ದೂರ ಇನ್ನೂ ಬಹಳಷ್ಟಿದೆ. ಎರಡನೇ ಹಂತದ ಮಾರ್ಗದ ಕಾರ್ಯಾಚರಣೆಯೊಂದಿಗೆ, ನಾವು 117 ಕಿ.ಮೀ ಮೆಟ್ರೊ ಸಂಪರ್ಕ ಸಾಧಿಸಲಿದ್ದೇವೆ. ಇದರಿಂದ 15 ಲಕ್ಷ ಮಂದಿ ಮೆಟ್ರೊದಲ್ಲಿ ಪ್ರಯಾಣಿಸಲು ಅವಕಾಶವಾಗಲಿದೆ. ಮೆಟ್ರೋ 2ಎ ಮತ್ತು 2ಬಿ ಹಂತದಲ್ಲಿ ಹೊರ ವರ್ತುಲ ರಸ್ತೆ ಮತ್ತು ವಿಮಾನ ನಿಲ್ದಾಣ ಸಂಪರ್ಕಿಸುವ 58 ಕಿ.ಮೀ ಉದ್ದದ ₹15,131 ಕೋಟಿ ವೆಚ್ಚದ ಮಾರ್ಗ 2027ರ ಡಿಸೆಂಬರ್ ನಲ್ಲಿ ಪೂರ್ಣಗೊಳ್ಳಲಿದೆ. ಈ ಮಾರ್ಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರವನ್ನು ಜೋಡಿಸಲಿದೆ’ ಎಂದು ಹೇಳಿದ್ದಾರೆ.
‘ಹಂತ-3ರ 44.65 ಕಿ.ಮೀ ಉದ್ದದ ₹15,611 ಕೋಟಿ ಹೂಡಿಕೆಯ ಮಾರ್ಗ ಬೆಂಗಳೂರು ನಗರದ ಸಂಪರ್ಕ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲಿದೆ. ಇದರ ಸಿವಿಲ್ ಕಾಮಗಾರಿಗಳು ಸಧ್ಯದಲ್ಲಿಯೇ ಆರಂಭವಾಗಲಿದೆ. ಮೆಟ್ರೊ ಹಂತ 4ರಲ್ಲಿ 53 ಕಿ.ಮೀ ಉದ್ದದ ಡಬಲ್ ಡೆಕ್ಕರ್-ಕಂ-ಮೆಟ್ರೊ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತಾ ವರದಿ (Feasibility Report) ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ನಮ್ಮ ರಾಜ್ಯವು ದೇಶದ ಐಟಿ ರಫ್ತಿನಲ್ಲಿ ಶೇ.35-40 ರಷ್ಟು ಕೊಡುಗೆ ಕೊಡುತ್ತಿದೆ. ಇದರಲ್ಲಿ ಬೆಂಗಳೂರಿನ ಪಾಲು ದೊಡ್ಡದು. ಎಲೆಕ್ಟ್ರಾನಿಕ್ಸ್ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯ ರಫ್ತಿನಲ್ಲಿ ಶೇ.40ಕ್ಕೂ ಹೆಚ್ಚಿನ ಪಾಲು ರಾಜ್ಯದ್ದಾಗಿದೆ.
ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ₹1.35 ಲಕ್ಷ ಕೋಟಿಗಳಿಗೂ ಅಧಿಕ ಮೊತ್ತದ ಯೋಜನೆಗಳನ್ನು ರೂಪಿಸಿ ಸಂಪನ್ಮೂಲಗಳನ್ನು ವಿನಿಯೋಗಿಸಿ ಬೆಂಗಳೂರನ್ನು ಮಾದರಿ ನಗರವನ್ನಾಗಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಅನೇಕ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ದೇಶದ ಆರ್ಥಿಕತೆಗೆ ಬೃಹತ್ ಕೊಡುಗೆ ಕೊಡುತ್ತಿರುವ ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರವೂ ಸಹ ಕೈ ಜೋಡಿಸಬೇಕೆಂದು ವಿನಂತಿಸುತ್ತೇನೆ’ ಎಂದಿದ್ದಾರೆ.












