ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಡೆಂಟಲ್ ವಿದ್ಯಾರ್ಥಿನಿಯೊಬ್ಬಳು ಕಣ್ಣು ನೋವಿನಿಂದ ಕಾಲೇಜಿಗೆ ರಜೆ ಹಾಕಿದ್ದಕ್ಕೆ ಕ್ಲಾಸ್ನಲ್ಲಿ ಅವಮಾನ ಮಾಡಿ, ಕಿರುಕುಳ ನೀಡಿದ್ದನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತಳನ್ನು ಪರಿಮಳ-ಭೋದೆವಯ್ಯ ದಂಪತಿಯ ಮಗಳು ಯಶಸ್ವಿನಿ(23) ಎಂದು ಗುರುತಿಸಲಾಗಿದೆ.
ಬೊಮ್ಮನಹಳ್ಳಿ ಖಾಸಗಿ ಕಾಲೇಜಿನ ವಿಭಾಗದಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಮೃತ ವಿದ್ಯಾರ್ಥಿನಿ ಬುಧವಾರ (ಜ.7) ಕಣ್ಣು ನೋವಿನಿಂದಾಗಿ ಕಾಲೇಜಿಗೆ ರಜೆ ಹಾಕಿದ್ದರು. ಮಾರನೇ ದಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮುಂದೆ ಉಪನ್ಯಾಸಕರು ಅವಮಾನಿಸಿದ್ದರು ಹಾಗೂ ಕಿರುಕುಳ ನೀಡಿದ್ದರು ಎಂದು ಆರೋಪ ಕೇಳಿಬಂದಿದೆ.
ಅವಮಾನ ಹಾಗೂ ಕಿರುಕುಳದಿಂದ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ವಿದ್ಯಾರ್ಥಿನಿ ತಾಯಿ ಆರೋಪಿಸಿದ್ದಾರೆ. ಟಾರ್ಚರ್ ನೀಡಿದ ಪ್ರಾಂಶುಪಾಲ ಹಾಗೂ ಅವಮಾನಿಸಿದ ಉಪನ್ಯಾಸಕ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮೃತ ವಿದ್ಯಾರ್ಥಿನಿಯ ಸಹಪಾಠಿಗಳು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

















