ಬೆಂಗಳೂರು: ಬೆಂಗಳೂರಿನ ಸುದ್ಧಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಇನ್ಫೋಸಿಸ್ ಉದ್ಯೋಗಿ ಶಿಲ್ಪಾ (27) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
2022ರ ಡಿಸೆಂಬರ್‌ನಲ್ಲಿ ಪ್ರವೀಣ್‌ನನ್ನು ವಿವಾಹವಾಗಿದ್ದರು. ಮದುವೆಯ ನಂತರ ಶಿಲ್ಪಾ, ಪತಿ ಪ್ರವೀಣ್ ಜತೆ ಬಿಟಿಎಂ ಲೇಔಟ್ ಒಂದನೇ ಹಂತದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಒಂದು ಮಗು ಸಹ ಆಗಿತ್ತು. ಜೊತೆಗೆ ಇನ್ನೊಂದು ಮಗುವಿಗೆ ಗರ್ಭಿಣಿ ಆಗಿದ್ದರು.ಸಾಫ್ಟ್‌ವೇರ್ ಕಂಪನಿಯಲ್ಲಿಎಂಜಿನಿಯರ್ ಆಗಿದ್ದ ಪ್ರವೀಣ್ 2023ರಲ್ಲಿ ಕೆಲಸ ಬಿಟ್ಟು ಪಾನಿಪೂರಿ ವ್ಯಾಪಾರ ಆರಂಭಿಸಿದ್ದನು. ಆದರೆ ಹೆಂಡತಿಗೆ ವರದಕ್ಷಿಣೆಗಾಗ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಳಿಯ ಪ್ರವೀಣ್ ಮತ್ತು ಆತನ ತಾಯಿ ಶಾಂತವ್ವನ ವರದಕ್ಷಿಣೆ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
ನೀನು ನೋಡಲು ಕಪ್ಪು ಮತ್ತು ಕುಳ್ಳಿ. ತನ್ನ ಮಗನಿಗೆ ಸರಿಯಾದ ಜೋಡಿಯಲ್ಲ ಎಂದು ಮಗಳಿಗೆ ಹೀಯಾಳಿಸುತ್ತಿದ್ದರು. ಮಗನನ್ನು ಬಿಟ್ಟು ಹೋಗು, ಆತನಿಗೆ ಬೇರೊಂದು ಹುಡುಗಿಯನ್ನು ನೋಡಿ ಮತ್ತೊಂದು ಮದುವೆ ಮಾಡುತ್ತೇನೆ ಎಂದು ಮಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಮದುವೆಯಾದ ದಿನದಿಂದಲೂ ಪ್ರವೀಣ್ ಮತ್ತು ಶಾಂತವ್ವ ಹಣಕ್ಕಾಗಿ ಮಗಳನ್ನು ಪೀಡಿಸುತ್ತಿದ್ದರು,” ಎಂದು ಶಿಲ್ಪಾಳ ತಾಯಿ ಶಾರದಾ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರವೀಣ್, ಹೊಸದಾಗಿ ಚಾಟ್ಸ್ ಅಂಗಡಿ ತೆರೆಯಲು ತವರು ಮನೆಯಿಂದ 5 ಲಕ್ಷ ರೂ. ತರುವಂತೆ ಮಗಳಿಗೆ ಕಿರುಕುಳ ಕೊಡುತ್ತಿದ್ದ. ಅಲ್ಲದೆ, ತಾಯಿಯ ಜತೆ ಸೇರಿ ಆರು ತಿಂಗಳ ಹಿಂದೆ ಮಗಳ ಮೇಲೆ ಹಲ್ಲೆನಡೆಸಿ ಮನೆಯಿಂದ ಹೊರ ಹಾಕಿದ್ದ. ಮಗಳ ಸಾವಿಗೆ ಅವರಿಬ್ಬರೇ ಕಾರಣ ಎಂದು ಶಿಲ್ಪಾ ತಾಯಿ ಶಾರದಾ ದೂರು ನೀಡಿದ್ದಾರೆ. ಪೊಲೀಸರು ವರದಕ್ಷಿಣೆ ಸಾವು ಪ್ರಕರಣ ದಾಖಲಿಸಿಕೊಂಡು ಪ್ರವೀಣ್‌ನನ್ನು ಬಂಧಿಸಿದ್ದಾರೆ.












