ಹಣಕಾಸಿನ ಮಾಹಿತಿ ಕೂಡಲೇ ಒದಗಿಸಿ: ವಿವಿಗಳಿಗೆ ರಾಜ್ಯ ಸರ್ಕಾರ ಸೂಚನೆ

ಬೆಂಗಳೂರು: ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ವಿಶ್ವವಿದ್ಯಾಲಯಗಳಿಗೆ ನೆರವು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ವಿಶ್ವವಿದ್ಯಾಲಯಗಳ ಪ್ರಸ್ತುತ ಆರ್ಥಿಕ ಸ್ಥಿತಿಗತಿ, ಬ್ಯಾಂಕ್‌ ಖಾತೆಯಲ್ಲಿನ ಮಾಹಿತಿ, ಠೇವಣಿ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದೆ.

ವೇತನ, ಅಭಿವೃದ್ಧಿ ಕಾರ್ಯ, ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಸಹ ಹಲವು ವಿಶ್ವವಿದ್ಯಾಲಯಗಳಲ್ಲಿ ಹಣವಿಲ್ಲ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ನಡೆಸಿದ ಅಧ್ಯಯನ ವರದಿ ಪ್ರಕಾರ ಕನಿಷ್ಠ 13 ವಿಶ್ವವಿದ್ಯಾಲಯಗಳ ಸಿಬ್ಬಂದಿಯ ನಿವೃತ್ತಿ ಪಿಂಚಣಿ ಬಾಕಿಯೇ ₹562 ಕೋಟಿ ಇದೆ. ಬೆಂಗಳೂರು, ಧಾರವಾಡ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳು ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿವೆ.

ಕೆಲ ವಿಶ್ವವಿದ್ಯಾಲಯಗಳು ಅನುಮೋದನೆಗಿಂತ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು, ಹೊರಗುತ್ತಿಗೆ, ಒಪ್ಪಂದದ ಆಧಾರದ ಮೇಲೆ ನೇಮಿಸಿರುವ ಸಿಬ್ಬಂದಿಯನ್ನು ವಜಾ ಮಾಡಬೇಕು. ಆಡಳಿತ ವೆಚ್ಚವನ್ನು ನಿಯಂತ್ರಿಸಬೇಕು. ಈ ಕುರಿತು ವರದಿ ಸಲ್ಲಿಸಬೇಕು ಎಂದೂ ಉನ್ನತ ಶಿಕ್ಷಣ ಇಲಾಖೆ ಹೇಳಿದೆ.