ಬೆಂಗಳೂರು: ಪೋಕ್ಸೋ ಕಾಯ್ದೆಗೆ ಲಿಂಗ ಭೇದ ಇಲ್ಲ ಎಂದು ಸಾರಿರುವ ಹೈಕೋರ್ಟ್, ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ 52 ವರ್ಷದ ಮಹಿಳೆಯ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ತನ್ನ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ 52 ವರ್ಷದ ಶಿಕ್ಷಕಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಮಹಿಳೆಗೆ ಪೋಕ್ಸೋ ಕಾಯ್ದೆ ಅನ್ವಯವಾಗುವುದಿಲ್ಲ. ಏಕೆಂದರೆ ಮಹಿಳೆ, ಬಾಲಕನ ಮೇಲೆ ಅತ್ಯಾಚಾರ ಎಸಗಲು ಅಥವಾ ಲೈಂಗಿಕ ದೌರ್ಜನ್ಯ ನಡೆಸಲು ಸಾಧ್ಯವಿಲ್ಲ. ಅಲ್ಲದೆ ಬಾಲಕನ ಕುಟುಂಬ ಹಾಗೂ ಶಿಕ್ಷಕಿಯ ನಡುವೆ ಹಣಕಾಸಿನ ವಹಿವಾಟು ಇತ್ತು. ಪಡೆದ ಹಣ ಹಿಂದಿರುಗಿಸಲಾಗದೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು.
ಬಾಲಕನ ಪೋಷಕರ ಪರ ವಕೀಲರು ವಾದ ಮಂಡಿಸಿ, ವರದಿಗಳ ಪ್ರಕಾರ ಗಂಡುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಶೇ.54.4ರಷ್ಟಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಶೇ.45.6ರಷ್ಟಿದೆ. ಆದರೆ, ಪ್ರಕರಣ ದಾಖಲಿಸಲು ಬಾಲಕರು ಅಥವಾ ಅವರ ಪೋಷಕರು ವಿಳಂಬ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಪ್ರಕರಣ ರದ್ದುಪಡಿಸಬಾರದು ಎಂದು ಕೋರಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ದೂರು ದಾಖಲಿಸಲು ತಡವಾಗಿದೆ ಎಂಬ ಮಾತ್ರಕ್ಕೆ ವಿಚಾರಣೆ ರದ್ದುಪಡಿಸಲು ಸಾಧ್ಯವಿಲ್ಲ. 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಕ್ಸೋ ಕಾಯ್ದೆ ರಕ್ಷಣೆಯಿದೆ. ಹೆಣ್ಣು ಮಕ್ಕಳ ರೀತಿಯಲ್ಲಿ ಗಂಡು ಮಕ್ಕಳಿಗೂ ರಕ್ಷಣೆಯಿದೆ. ಪೋಕ್ಸೋ ಕಾಯ್ದೆಗೆ ಲಿಂಗ ಭೇದ ಇಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತು.
ಚಿತ್ರಕಲೆ ಕಲಿಯಲು ಶಿಕ್ಷಕಿ ಮನೆಗೆ ಬರುತ್ತಿದ್ದಾಗ ಕೃತ್ಯ :
ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2020ರಲ್ಲಿ ಈ ಲೈಂಗಿಕ ದೌರ್ಜನ್ಯ ಘಟನೆ ನಡೆದಿದ್ದು, 4 ವರ್ಷದ ಬಳಿಕ ಅಂದರೆ 2024ರಲ್ಲಿ ಮಹಿಳೆ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಆರೋಪಿ ಮಹಿಳೆ ಕಲಾ ಶಿಕ್ಷಕಿಯಾಗಿದ್ದು, ಚಿತ್ರಕಲೆ ಕಲಿಯಲು ಮನೆಗೆ ಬರುತ್ತಿದ್ದ ಬಾಲಕನನನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾಳೆ. ಈ ಮಧ್ಯೆ ಬಾಲಕ ಹಾಗೂ ಆತನ ಪೋಷಕರು ದುಬೈಗೆ ಸ್ಥಳಾಂತರವಾಗಿದ್ದಾರೆ. ಆಗ ಬಾಲಕ ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದ. ಈ ಸಂಬಂಧ ಪೋಷಕರು ಬಾಲಕನನ್ನು ಮನಶಾಸ್ತ್ರಜ್ಞ ಬಳಿ ಕರೆದುಕೊಂಡು ಹೋಗಿದ್ದು, ಆ ವೇಳೆ ಬಾಲಕ ಶಿಕ್ಷಕಿಯ ಕೃತ್ಯದ ಬಗ್ಗೆ ತಿಳಿಸಿದ್ದಾನೆ. ಆಗ ಬಾಲಕನ ಪೋಷಕರು ಬೆಂಗಳೂರಿಗೆ ಆಗಮಿಸಿ ಶಿಕ್ಷಕಿಯ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.












