ಬೆಂಗಳೂರು: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಲ್ಲಿ ಉದ್ಯಮಿಗೆ ಬೆದರಿಕೆ ಹಾಕಿದ್ದ ನಾಲ್ವರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.
ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಬೇಡಿಕೆ:
ಬಂಧಿತರನ್ನು ಬೆಂಗಳೂರಿನ ಮಹಮ್ಮದ್ ರಫಿಕ್, ಉತ್ತರ ಪ್ರದೇಶದ ಶಿಶುಪಾಲ್ ಸಿಂಗ್, ವನ್ಷ್ ಸಚ್ ದೇವ್ ಮತ್ತು ಅಮಿತ್ ಚೌಧರಿ ಎಂದು ಗುರುತಿಸಲಾಗಿದೆ. ಜು.9 ರಂದು ಆರೋಪಿಗಳು ಉದ್ಯಮಿ ರಿಕಬ್ ಚಂದ್ ಸಿಂಘ್ವಿಗೆ ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಕರೆ ಮಾಡಿ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ರೆ ನಿನ್ನ ಮಗುವನ್ನು ಅಪಹರಿಸುತ್ತೇವೆ ಎಂದು ಬೆದರಿಕೆ ಹಾಕಲಾಗಿರುತ್ತದೆ.
ಬೆದರಿಕೆ ಕರೆ ಬಗ್ಗೆ ಉದ್ಯಮಿ ರಿಕಬ್ ಚಂದ್ ಸಿಂಘ್ವಿ ಶೇಷಾದ್ರಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕರೆ ಜಾಡು ಹಿಡಿದು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಒಂದು ತಂಡ ಕೆಲಸ ಮಾಡಿದ್ರೆ ಸಿಸಿಬಿ ಡಿಸಿಪಿ 2 ರಾಜ ಇಮಾಮ್ ಖಾಸಿಮ್ ನೇತೃತ್ವದಲ್ಲಿ ಒಂದು ತಂಡ ಕೆಲಸ ಮಾಡಿ 48 ಗಂಟೆಯಲ್ಲೇ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ಆರೋಪಿಗಳು ತಿಹಾರ್ ಜೈಲಿನಲ್ಲಿದ್ದಾಗ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ಈ ವೇಳೆ ಕೆಲವೊಮ್ಮೆ ಲಾರೆನ್ಸ್ ಬಿಷ್ಣೋಯಿಯನ್ನು ನೋಡಿದ್ದರು. ಇನ್ನೂ ಆರೋಪಿಗಳ ಬಳಿ ಗನ್ ಕೂಡ ಸಿಕ್ಕಿದ್ದು, ಆರೋಪಿ ರಫೀಕ್ ಹಾಗೂ ದೂರುದಾರನಿಗೆ ಹಣದ ವ್ಯವಹಾರದಲ್ಲಿ ಇಬ್ಬರಿಗೂ ಮನಸ್ತಾಪ ಆಗಿದ್ದು, ಇದೇ ವಿಚಾರಕ್ಕೆ ಸಂಚು ಮಾಡಿ ರಫೀಕ್ ಒಂದು ಕೋಟಿ ಹಣ ಪಡೆಯಲು ಈ ರೀತಿ ಮಾಡಿದ್ದಾಗಿ ತಿಳಿದು ಬಂದಿದೆ. ಸದ್ಯ ಆರೋಪಿಗಳ ವಿಚಾರಣೆ ನಡೆಯುತ್ತಿದೆ.












