ಉಡುಪಿ: ನಟ ದರ್ಶನ್ ಜಾಮೀನು ರದ್ದು ವಿಚಾರಕ್ಕೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ನ್ಯಾಯಾಲಯವು ನ್ಯಾಯ ದೊರಕಿಸಿಕೊಡಲು ಈಗಾಗಲೇ ಒಮ್ಮೆ ತೀರ್ಪು ಕೊಟ್ಟಿದೆ. ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.
ಕೆ.ಎನ್. ರಾಜಣ್ಣನ ಪುತ್ರನಿಗೆ ಸಚಿವ ಸ್ಥಾನ ಕೊಡುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅಧಿಕಾರ ಇದೆ. ಆದರೆ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಹೈಕಮಾಂಡ್ ಹೇಳಿದ್ದೆ ಅಂತಿಮ ಅಂದ್ರು.
ಶೀಘ್ರವೇ ಜೂನ್, ಜುಲೈ ತಿಂಗಳ ಗೃಹಲಕ್ಷ್ಮೀ ಹಣ ಬಿಡುಗಡೆ:
ಜೂನ್, ಜುಲೈ ತಿಂಗಳ ಗೃಹಲಕ್ಷ್ಮೀ ಹಣ ಬಿಡುಗಡೆ ಆಗಿಲ್ಲ. ಆದರೆ ಜೂನ್ ತಿಂಗಳ ಹಣವನ್ನು ನಾಲ್ಕೈದು ದಿನಗಳ ಹಿಂದೆಯೇ ಬಿಡುಗಡೆ ಮಾಡಲಾಗಿದೆ. ಶೀಘ್ರವೇ ಎಲ್ಲ ಫಲಾನುಭವಿಗಳ ಖಾತೆಗೆ ಹಣ ಕ್ರೆಡಿಟ್ ಆಗಲಿದೆ. ಜುಲೈ ತಿಂಗಳ ಹಣವನ್ನು 15 ದಿನಗಳೊಳಗೆ ಬಿಡುಗಡೆ ಮಾಡುತ್ತೇವೆ. ವರಲಕ್ಷ್ಮೀ ಹಬ್ಬಕ್ಕೆ ಜೂನ್ ತಿಂಗಳ ಹಣ ಬಿಡುಗಡೆ ಮಾಡಿದ್ದೇವೆ. ಗಣೇಶ ಚತುರ್ಥಿಗೆ ಜುಲೈ ತಿಂಗಳ ಹಣ ಬಿಡುಗಡೆ ಮಾಡಬೇಕೆಂಬ ಆಸೆ ಇದೆ ಎಂದರು.












