ಬೆಂಗಳೂರು: 11 ಬಾರಿ ಪತ್ನಿಯನ್ನು ಇರಿದು ಕೊಂದ ಪತಿರಾಯ!

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಯಲ್ಲಿ ನಡು ರಸ್ತೆಯಲ್ಲಿ ಪುತ್ರಿಯ ಎದುರೇ 2ನೇ ಪತ್ನಿಗೆ ಚಾಕುವಿನಿಂದ ಹಿರಿದು ಪತಿಯೇ ಬರ್ಬರವಾಗಿ ಹತ್ಯೆಗೈದಿದ್ದಾನೆ.

ಕೆಬ್ಬೆಹಳ್ಳ ನಿವಾಸಿ ರೇಖಾ(32) ಹತ್ಯೆಯಾದ ಮಹಿಳೆ. ಕೃತ್ಯ ಎಸಗಿದ ಆಕೆಯ ಪತಿ ಲೋಹಿತಾಶ್ವ(35) ಎಂಬಾತನ ಪತ್ತೆ ಕಾರ್ಯ ನಡೆಯುತ್ತಿದ್ದು, ಆರೋಪಿ ಸೋಮವಾರ ಬೆಳಗ್ಗೆ 9 ಗಂಟೆಗೆ ಸುಂಕದಕಟ್ಟೆಯ ಬಸ್ ನಿಲ್ದಾಣದಲ್ಲಿ ಹತ್ಯೆಗೈದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ ರೇಖಾಗೆ ಈಗಾಗಲೇ ಮದುವೆಯಾಗಿದ್ದು, ಕೌಟುಂಬಿಕ ಕಾರಣಕ್ಕೆ ಪತಿಯಿಂದ ವಿಚ್ಛೇಧನ ಪಡೆದುಕೊಂಡಿದ್ದರು. ಇಬ್ಬರು ಹೆಣ್ಣು ಮಕ್ಕಳ ಜತೆ ಚನ್ನೆನ್ನಹಳ್ಳಿಯಲ್ಲಿ ವಾಸವಾಗಿದ್ದು, ಸಮೀಪದಲ್ಲಿರುವ ಟೆಲಿಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಲೋಹಿತಾಶ್ವನಿಗೂ ಮದುವೆಯಾಗಿದ್ದು, ಮಕ್ಕಳು ಇದ್ದಾರೆ. ಕೌಟುಂಬಿಕ ಕಾರಣಕ್ಕೆ ಪತ್ನಿ-ಮಕ್ಕಳಿಂದ ದೂರವಾಗಿದ್ದಾನೆ. ಈ ಮಧ್ಯೆ ಸ್ನೇಹಿತರ ಮೂಲಕ ಪರಿಚಯವಾದ ರೇಖಾ ಜತೆ ಸ್ನೇಹ ಬೆಳೆಸಿದ್ದಾನೆ. ಒಂದೂವರೆ ವರ್ಷದಿಂದ ಇಬ್ಬರು ಆತ್ಮೀಯತೆ ಹೊಂದಿದ್ದರು. ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದು, ಕೆಬ್ಬೆಹಳ್ಳದ ಬಾಡಿಗೆ ಮನೆಯಲ್ಲಿ ರೇಖಾ, ಆಕೆಯ ಒಬ್ಬ ಮಗಳ ಜತೆ ಲೋಹಿತಾಶ್ವ ವಾಸವಾಗಿದ್ದ. ರೇಖಾ ತನ್ನ ಕಿರಿಯ ಪುತ್ರಿಯನ್ನು ತನ್ನ ಪಾಲಕರ ಮನೆಯಲ್ಲಿ ಇರಿಸಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದುವೆಯಾದ ಬಳಿಕ ರೇಖಾ, ಪತಿ ಲೋಹಿತಾಶ್ವನಿಗೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕಾರು ಚಾಲಕನಾಗಿ ಕೆಲಸ ಕೊಡಿಸಿದ್ದಳು. ಈ ಮಧ್ಯೆ ಒಂದೂವರೆ ತಿಂಗಳಿಂದ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ನಿತ್ಯ ಜಗಳ ನಡೆಯುತ್ತಿತ್ತು.

ಮಗಳ ಮುಂದೆಯೇ 11 ಬಾರಿ ಇರಿದ:
ಸೋಮವಾರ ಬೆಳಗ್ಗೆಯೂ ದಂಪತಿ ನಡುವೆ ಮನೆಯಲ್ಲಿ ಜಗಳ ನಡೆದಿದ್ದು, 11 ಗಂಟೆಗೆ ರೇಖಾ ತನ್ನ 13 ವರ್ಷದ ಮಗಳ ಜತೆ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಆಗ ಸ್ಥಳಕ್ಕೆ ಬಂದ ಆರೋಪಿ ಪತ್ನಿ ಜತೆ ಜಗಳ ತೆಗೆದಿದ್ದಾನೆ. ಆಗ ಸ್ಥಳದಲ್ಲಿದ್ದ ಪುತ್ರಿ ತಡೆಯಲು ಮುಂದಾಗಿದ್ದಾಳೆ. ಆದರೂ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ರೇಖಾಳ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಇರಿದಿದ್ದು, ಆತನಿಂದ ತಪ್ಪಿಸಿಕೊಂಡು ಮುಂದೆ ಹೋಗಿದ್ದಾರೆ. ಆದರೂ ಆರೋಪಿ ತನ್ನ ಮಗಳ ಎದುರೇ ರೇಖಾಳಿಗೆ 11ಕ್ಕೂ ಹೆಚ್ಚು ಬಾರಿ ಸಾರ್ವಜನಿಕವಾಗಿ ಇರಿದು ಹತ್ಯೆಗೈದಿದ್ದಾನೆ. ಸ್ಥಳೀಯರು ಹಿಡಿಯಲು ಹೋದಾಗ ಆರೋಪಿ ಚಾಕು ತೋರಿಸಿ ಪರಾರಿಯಾಗಿದ್ದಾನೆ.

ಘಟನೆಯಿಂದ ರೇಖಾಳ ಪುತ್ರಿ ಆಘಾತಕ್ಕೊಳಗಾಗಿದ್ದು, ಆಕೆಯನ್ನು ಆಪ್ತಸಮಾಲೋಚನೆ ಮಾಡಲಾಗುತ್ತಿದೆ. ಆಕೆಯ ದೂರು ಮತ್ತು ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.