ಮಿಜೋರಾಂನಲ್ಲಿ ಸಶಸ್ತ್ರ ಕುಕಿ ಒಳನುಸುಳುವಿಕೆ ಸಮಸ್ಯೆ: ಜಂಟಿ ಕಾರ್ಯಾಚರಣೆಗೆ ಮುಂದಾದ ಭಾರತ ಮತ್ತು ಬಾಂಗ್ಲಾದೇಶ

ನವದೆಹಲಿ: ಈಶಾನ್ಯ ಭಾರತದ ಪ್ರಕ್ಷುಬ್ಧ ಮಿಜೋರಾಂ ರಾಜ್ಯಕ್ಕೆ ಸಶಸ್ತ್ರ ಬಂಡುಕೋರರು ನಿರಾಶ್ರಿತರಾಗಿ ನುಸುಳುತ್ತಿರುವ ಆತಂಕಕಾರಿ ಸುದ್ದಿಯಿಂದ ಬಾಂಗ್ಲಾದೇಶ ಮತ್ತು ಭಾರತ ಆತಂಕಗೊಂಡಿವೆ. ದೆಹಲಿ ಮತ್ತು ಢಾಕಾ ಎರಡೂ ಪ್ರದೇಶದಲ್ಲಿನ ಹೊಸ ಭದ್ರತಾ ಸವಾಲುಗಳನ್ನು ಎದುರಿಸಲು ಗುಪ್ತಚರ ವರದಿಗಳನ್ನು ಹಂಚಿಕೊಳ್ಳುತ್ತಿದ್ದು, ಸ್ಥಳೀಯ ಪತ್ರಿಕೆ ಮತ್ತು ಸ್ಥಳೀಯ ಮೂಲಗಳಿಂದ ಮಾಹಿತಿ ಕ್ರೋಢೀಕರಿಸುತ್ತಿದೆ.

ಕುಕಿ-ಚಿನ್ ರಾಷ್ಟ್ರೀಯ ಸೇನೆಯು (KNA) ಬಾಂಗ್ಲಾದೇಶ ಸೇನೆ ಮತ್ತು ಗಣ್ಯ ಅಪರಾಧ-ವಿರೋಧಿ ಪಡೆ ರಾಪಿಡ್ ಆಕ್ಷನ್ ಬೆಟಾಲಿಯನ್ (RAB) ನೊಂದಿಗೆ ಹಲವಾರು ಕದನಗಳಲ್ಲಿ ತೊಡಗಿದೆ. ದಾಳಿಯ ಸಮಯದಲ್ಲಿ, ಬಾಂಗ್ಲಾದೇಶದ ಸೇನೆಯ ಅಧಿಕಾರಿ ಸೇರಿದಂತೆ ಹಲವಾರು ಸೈನಿಕರು ಮೃತರಾಗಿದ್ದರು ಮತ್ತು ಇತರರು ಗಂಭೀರವಾಗಿ ಗಾಯಗೊಂಡಿದ್ದರು. ಭದ್ರತಾ ಪಡೆಗಳು ಕೆಎನ್‌ಎ ಭಯೋತ್ಪಾದಕರ ಮೇಲೆ ಭಾರೀ ಸಾವುನೋವುಗಳನ್ನು ಉಂಟುಮಾಡಿದ್ದವು.

ಶಸ್ತ್ರಸಜ್ಜಿತ ಕುಕಿ ಗೆರಿಲ್ಲಾಗಳು ಚದುರಿಹೋಗಿವೆ ಮತ್ತು ದೂರದ ಬೆಟ್ಟ-ಅರಣ್ಯ ಭೂಪ್ರದೇಶಕ್ಕೆ ಸ್ಥಳಾಂತರಗೊಂಡಿವೆ ಎಂದು ಚಿತ್ತಗಾಂಗ್ ಹಿಲ್ ಟ್ರಾಕ್ಟ್ಸ್ (CHT) ನಲ್ಲಿನ ಹಲವಾರು ಮೂಲಗಳು ದೃಢಪಡಿಸಿವೆ. ದಟ್ಟ ಅರಣ್ಯವಾಗಿರುವುದರಿಂದ ಅಲ್ಲಿ ಬಂಡಾಯ-ವಿರೋಧಿ ಕಾರ್ಯಾಚರಣೆ ಕಷ್ಟಕರವಾಗಿದೆ.

ಕಳೆದ ವರ್ಷ, ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಕೆಎನ್‌ಎಯ ಪ್ರಧಾನ ಕಚೇರಿ ಮತ್ತು ರಹಸ್ಯ ತರಬೇತಿ ಸ್ಥಳವನ್ನು ನಾಶಮಾಡಲಾಗಿದೆ. ಭಾರತ ಮತ್ತು ಬಾಂಗ್ಲಾ ಸರಹದ್ದಿನ ಮಿಜೋರಾಂ ಪ್ರಾಂತ್ಯದ ನಿರ್ಜನ ಪ್ರದೇಶದಲ್ಲಿ ಕುಕಿ ಬಂಡುಕೋರರು ಅಡಗಿ ಕುಳಿತಿದ್ದು, ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದಾರೆ. ಏತನ್ಮಧ್ಯೆ, ಎರಡು ಆತಂಕಕಾರಿ ಘಟನೆಗಳ ನಂತರ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದೊಂದಿಗಿನ ಭಾರತದ ಗಡಿಯನ್ನು ಕಾಪಾಡುವ ಅಸ್ಸಾಂ ರೈಫಲ್ಸ್ ಮತ್ತು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ರೆಡ್ ಅಲರ್ಟ್ ನೀಡಿವೆ.

ಕೆ.ಎನ್.ಎ ಯು ಉಗ್ರಗಾಮಿ ಸಂಘಟನೆ ಜಮಾತುಲ್ ಅನ್ಸಾರ್ ಫಿಲ್ ಹಿಂದಲ್ ಶರ್ಕಿಯಾ ಜೊತೆ ಕೈಜೋಡಿಸಿದ್ದು ಇದರ ಸದಸ್ಯರಿಗೆ ಸಶಸ್ತ್ರ ತರಬೇತಿ ನೀಡುವ ಬಗ್ಗೆ ಮಾಹಿತಿ ದೊರೆತಿದ್ದು ಅದರ ಸ್ಥಾಪಕ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿದೆ. ಅಸ್ಸಾಂ ರೈಫಲ್ಸ್ ಕೂಡ ಕೆಎನ್‌ಎ ಮತ್ತು ಭಯೋತ್ಪಾದಕ ಗುಂಪಿನ ನಡುವಿನ ಸಂಪರ್ಕವನ್ನು ದೃಢಪಡಿಸಿದೆ. ಮಿಜೋರಾಂ ಅನ್ನು ಬಳಸಿ ಬಾಂಗ್ಲಾದೇಶದ ಮಿಲಿಟರಿ ಮೇಲೆ ಐಇಡಿ ದಾಳಿಗಳನ್ನು ಮಾಡುವ ಸಾಧ್ಯತೆಯ ಬಗ್ಗೆ ಭಾರತೀಯ ಪಡೆಗಳು ಆತಂಕ ಹೊಂದಿವೆ. ಆದಾಗ್ಯೂ, ಅತ್ಯುತ್ತಮ ಭದ್ರತಾ ಸಹಕಾರದೊಂದಿಗೆ, ಭಾರತವು ತನ್ನ ಈಶಾನ್ಯ ರಾಜ್ಯದಲ್ಲಿ ಉಗ್ರಗಾಮಿಗಳು ಬೀಡು ಬಿಡುವುದನ್ನು ಮತ್ತು ಬಾಂಗ್ಲಾದೇಶದ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮಿಜೋರಾಂ ಅನ್ನು ಬಳಸುವುದನ್ನು ತಡೆಗಟ್ಟಲು ಬಾಂಗ್ಲಾದೇಶದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಿದೆ ಎಂದು ವರದಿಗಳು ಹೇಳಿವೆ.