ಬೆಂಗಳೂರು: ದೂರದ ಅಮೇರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಮಗ ಹೃದಯಾಘಾತದಿಂದ ಮೃತಪಟ್ಟಿದ್ದು, ಬೆಂಗಳೂರಿನಲ್ಲಿದ್ದ ಆತನ ಹೆತ್ತವರಿಗೆ 3 ಗಂಟೆಗಳಲ್ಲಿ ಪಾಸ್ ಪೋರ್ಟ್ ನೀಡಿದ ಬೆಂಗಳೂರು ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿ ಕ್ಷಿಪ್ರ ಕಾರ್ಯಾಚರಣೆಗೆ ಮಾದರಿಯಾಗಿದೆ.
70 ವರ್ಷದ ಯಲಹಂಕಾ ನಿವಾಸಿಗಳಾದ ರಂಗರಾಜು ಮತ್ತು ಗೀತಾ ದಂಪತಿ ತಮ್ಮ ಪುತ್ರನ ಅಂತ್ಯಕ್ರಿಯೆ ನಡೆಸಲು ಬುಧವಾರ ಬೆಳಿಗ್ಗೆ ಕೆಐಎಎಲ್ ನಿಂದ ಟೆಕ್ಸಾಸ್ ಗೆ ಪ್ರಯಾಣಿಸಿದ್ದಾರೆ.
ವೃದ್ಧ ದಂಪತಿಯ ಸಂಬಂಧಿ ಹಾಗೂ ಪಾಸ್ ಪೋರ್ಟ್ ಪಡೆಯಲು ಸಹಕರಿಸಿದ ಆರ್ ಎನ್ ಕಿಶೋರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ತನ್ನ ಸಂಬಂಧಿ ಕಾರ್ತಿಕ್ ಅಮೇರಿಕಾದಲ್ಲಿ ಮೃತಪಟ್ಟಿರುವುದರ ಬಗ್ಗೆ ಸೋಮವಾರ ಬೆಳಿಗ್ಗೆ (ಡಿ.25) ರಂದು ಮಾಹಿತಿ ತಿಳಿಯಿತು. 43 ವರ್ಷದ ಕಾರ್ತಿಕ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಪತ್ನಿ ಹಾಗೂ ಮಕ್ಕಳೊಂದಿಗೆ ಕೊಲೊರಾಡೋಗೆ ರಜೆ ಮೇಲೆ ತೆರಳಿದ್ದಾಗ ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಅಂತ್ಯಕ್ರಿಯೆಯ ವಿಧಿಗಳನ್ನು ಟೆಕ್ಸಾಸ್ನಲ್ಲಿ ನಡೆಸಲು ಮತ್ತು ವಿಮಾನ ಟಿಕೆಟ್ಗಳನ್ನು ಕಾಯ್ದಿರಿಸಲು ಪೋಷಕರು ನಿರ್ಧರಿಸಿದ್ದರೆ. ಇಬ್ಬರ ಬಳಿಯೂ ವೀಸಾಗಳನ್ನು ಇತ್ತು ಎಂದು ಖಾಸಗಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕರಾಗಿರುವ ಕಿಶೋರ್ ಹೇಳಿದ್ದಾರೆ.
ಸೋಮವಾರ ಸಂಜೆ ತಮ್ಮ ಪಾಸ್ಪೋರ್ಟ್ಗಳನ್ನು ಪರಿಶೀಲಿಸಿದಾಗ, ಗೀತಾ ಅವರು ಮಾರ್ಚ್ 2024 ರವರೆಗೆ ಸಿಂಧುತ್ವವನ್ನು ಹೊಂದಿದ್ದರು. ಆದರೆ ಅವರು ಅಮೇರಿಕಾಗೆ ಭೇಟಿ ನೀಡಲು ಕನಿಷ್ಠ ಆರು ತಿಂಗಳ ಸಿಂಧುತ್ವ ಅಗತ್ಯ. ರಂಗರಾಜು ಅವರಿಗೆ ಅಗತ್ಯ ಪಾಸ್ಪೋರ್ಟ್ ಸಿಂಧುತ್ವ ಇತ್ತು ಎಂದರು.
ಕಿಶೋರ್ ಅವರ ಪರಿಚಯಸ್ಥರೊಬ್ಬರು ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಕೆ ಕೃಷ್ಣ ಅವರ ಪರಿಚಯ ಹೊಂದಿದ್ದು ತಕ್ಷಣ ಅವರನ್ನು ಸಂಪರ್ಕಿಸಲಾಯಿತು.
ದಂಪತಿಗಳು ಕೋರಮಂಗಲದ ಆರ್ಪಿಒ ಮುಖ್ಯ ಕಚೇರಿಗೆ ಬೆಳಿಗ್ಗೆ 10 ಗಂಟೆಗೆ ತಲುಪಿ ದಾಖಲೆಗಳನ್ನು ಸಲ್ಲಿಸಿದರು. ಮರುವಿತರಿಸಿದ ಪಾಸ್ಪೋರ್ಟ್ನೊಂದಿಗೆ ಅವರು ಮಧ್ಯಾಹ್ನ 1 ಗಂಟೆಗೆ ಹೊರನಡೆದರು. ಅವರ ಟಿಕೆಟ್ಗಳನ್ನು ತಕ್ಷಣವೇ ಕಾಯ್ದಿರಿಸಿ ಹೊರಡುವ ವ್ಯವಸ್ಥೆ ಮಾಡಲಾಯಿತು. ಪಾಸ್ ಪೋರ್ಟ್ ಇಷ್ಟು ಬೇಗ ದೊರಕುತ್ತದೆ ಎಂದು ಊಹಿಸಿರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿರುವುದಾಗಿ ವರದಿ ಹೇಳಿದೆ.