ಬೆಂಗಳೂರು: ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ, ಆದರೆ ಸವಾಲಿನಿಂದ ಹಿಂದೆ ಸರಿಯುವವನಲ್ಲ. ಪಕ್ಷವನ್ನು ಬೂತು ಮಟ್ಟದಿಂದ ಕಟ್ಟಿ ಬೆಳೆಸುವುದು ನನ್ನ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪ್ರತಿಜ್ಞೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಾನು ಯಾವ ತಪ್ಪೂ ಮಾಡಿಲ್ಲ. ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ. ಆದರೆ ನನ್ನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಜಗ್ಗುವುದಿಲ್ಲ ಎಂದು ಅಬ್ಬರಿಸಿದರು.
ನಾನು ಕನಕಪುರದ ಬಂಡೆ ಅಲ್ಲ. ವಿಧಾನಸೌಧದ ಮೆಟ್ಟಿಲುಗಳ ಚಪ್ಪಡಿ ಕಲ್ಲು ನಾನಾದರೆ ಸಾಕು, ಆ ಕಲ್ಲನ್ನು ಮೆಟ್ಟಿಕೊಂಡು ಹಲವಾರು ಮಂದಿ ವಿಧಾನಮಂಡಲಕ್ಕೆ ತೆರಳುವಂತಾಗಬೇಕು ಎಂದರು.
ಪಕ್ಷಕ್ಕಾಗಿ ನಾನು ಅನೇಕ ತ್ಯಾಗ ಮಾಡಿದ್ದೇನೆ, ಪಕ್ಷವೂ ನನ್ನನ್ನು ಕಡೆಗಣಿಸಿದ್ದರೂ ನಾನು ಪಕ್ಷ ದ್ರೋಹ ಮಾಡಲಿಲ್ಲ. ನನ್ನ ಈ ನಿಷ್ಠೆಗೆ ಈಗ ಬೆಲೆ ಸಿಕ್ಕಿದೆ ಎಂದು ಹೇಳಿದರು.