ಬಾಂಬೆ ಮಿಠಾಯಿ ಬಳಿಕ ಕೃತಕ ರಾಸಾಯನಿಕ ಬಳಸಿದ ಗೋಬಿ ಮಂಚೂರಿ ಮಾರಾಟಕ್ಕೂ ನಿಷೇಧ? ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು: ನೆರೆಯ ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಿಷೇಧಿಸಲಾಗಿರುವ ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ನು ರಾಜ್ಯದಲ್ಲೂ ನಿಷೇಧಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿದ್ದು ವರದಿ ಆರೋಗ್ಯ ಇಲಾಖೆ ಕೈ ಸೇರಿದೆ.

ಕಾಟನ್‌ ಕ್ಯಾಂಡಿಯಲ್ಲಿ ಹಾನಿಕಾರಕ ‘ರೋಡಮೈನ್‌-ಬಿ’ ಹಾಗೂ ಗೋಬಿ ಮಂಚೂರಿಯಲ್ಲಿ’ಸನ್‌ಸೆಟ್‌ ಯೆಲ್ಲೊ’ ಬಣ್ಣ ಮತ್ತು ‘ಟಾಟ್ರಾಜಿನ್‌’ ರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿಆರೋಗ್ಯ ಇಲಾಖೆಯು ಎರಡೂ ತಿನಿಸುಗಳನ್ನು ನಿಷೇಧಿಸಲು ಮುಂದಾಗಿದೆ. ಆಹಾರ ಮತ್ತು ಸುರಕ್ಷತಾ ಇಲಾಖೆ ವರದಿ ಆಧರಿಸಿ ಆರೋಗ್ಯ ಸಚಿವರು ಸೋಮವಾರ ರಾಜ್ಯದಲ್ಲಿ ಇವುಗಳ ನಿಷೇಧ ಪ್ರಕಟಿಸುವ ಸಂಭವವಿದೆ.

ತಮಿಳುನಾಡಿನ ಸರಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಬಾಂಬೆ ಮಿಠಾಯಿ (ಕಾಟನ್‌ ಕ್ಯಾಂಡಿ)ಯಲ್ಲಿ ರೋಡಮೈನ್‌-ಬಿ ಅಂಶ ಇರುವುದು ದೃಢಪಟ್ಟಿದೆ. ಹೀಗಾಗಿ ನಿಷೇಧ ಹೇರಲಾಗಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕ್ಯಾನ್ಸರ್‌ ರೋಗ ಬರುವ ಸಾಧ್ಯತೆ ಇದೆ ಎಂಬ ಅಂಶ ವರದಿಯಲ್ಲಿಉಲ್ಲೇಖಿಸಲಾಗಿದೆ. ಆದ್ದರಿಂದ ರಾಜ್ಯದಲ್ಲೂ ಬಾಂಬೆ ಮಿಠಾಯಿಯ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

ರೋಡಮೈನ್‌-ಬಿ ರಾಸಾಯನಿಕ ಆರೋಗ್ಯಕ್ಕೆ ಹಾನಿಕಾರಕ

ರೋಡಮೈನ್‌-ಬಿ ಅಥವಾ ಆರ್‌ಎಚ್‌ಬಿ ಎಂದು ಕರೆಯುವ ರಾಸಾಯನಿಕವನ್ನು ಜವಳಿ, ಕಾಗದ, ಚರ್ಮ ಮತ್ತು ಬಣ್ಣಗಳ ಉದ್ಯಮದಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣಕ್ಕಾಗಿ ಬಳಸಲಾಗುತ್ತದೆ. ಈ ರಾಸಾಯನಿಕವು ಆಹಾರದ ಮೂಲಕ ದೇಹ ಸೇರಿದರೆ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಕೇವಲ ಕ್ಯಾಂಡಿಯಲ್ಲಿ ಮಾತ್ರವಲ್ಲ; ಸಿಹಿ ತಿಂಡಿಗಳು, ಬಣ್ಣದ ಮಿಠಾಯಿಗಳು, ಕೆಂಪು ಮೆಣಸಿನಕಾಯಿ, ಮೆಣಸಿನ ಪುಡಿ ಇನ್ನೂ ಅನೇಕ ಸಂಸ್ಕರಿಸಿದ ಆಹಾರಗಳಲ್ಲಿ ಕಂಡುಬರುತ್ತದೆ.

”ರೋಡಮೈನ್‌-ಬಿ ನಿಯಮಿತವಾಗಿ ಸೇವಿಸಿದರೆ ಮೆದುಳಿನಲ್ಲಿರುವ ಸೆರೆಬೆಲ್ಲಮ್‌ ಅಂಗಾಂಶಕ್ಕೆ ಮತ್ತು ಮಿದುಳನ್ನು ಬೆನ್ನು ಹುರಿಗೆ ಸಂಪರ್ಕಿಸುವ ಮೆದುಳಿನ ಕಾಂಡಕ್ಕೆ ತೀವ್ರ ಹಾನಿ ಉಂಟುಮಾಡುತ್ತದೆ,” ಎಂದು ತಜ್ಞರು ಹೇಳುತ್ತಾರೆ.

170ಕ್ಕೂ ಹೆಚ್ಚು ಕಡೆ ಪರೀಕ್ಷೆ

ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 100ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿಗಳು ಅಸುರಕ್ಷಿತ ಎಂದು ವರದಿಯಲ್ಲಿಉಲ್ಲೇಖಿಸಿದ್ದಾಗಿ ತಿಳಿದು ಬಂದಿದೆ.

ಗೋಬಿ ಮಂಚೂರಿ ಮಾದರಿಯಲ್ಲಿಯೇ ಚಿಕನ್‌ ಕಬಾಬ್‌ ಅನ್ನು ಸಿದ್ಧಪಡಿಸಲಾಗುತ್ತದೆ. ಕಬಾಬ್‌ನ ರುಚಿ ಹೆಚ್ಚಿಸಲು, ಆಕರ್ಷಕವಾಗಿ ಕಾಣುವಂತೆ ಮಾಡಲು ಪೌಡರ್‌ ಬಳಸಲಾಗುತ್ತದೆ. ಇದು ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕೂಡಲೇ ಈ ಮಾದರಿಯ ಕಬಾಬ್‌ ಅನ್ನು ನಿಷೇಧಿಸಬೇಕೆಂದು ಆಹಾರ ತಜ್ಞರು ಮತ್ತು ವೈದ್ಯರು ಒತ್ತಾಯಿಸಿದ್ದಾರೆ.