ಪಿಟ್‌ ಬುಲ್‌ , ಬುಲ್‌ ಡಾಗ್‌, ರಾಟ್ ವೀಲರ್ ಸೇರಿದಂತೆ 23 ತಳಿಯ ನಾಯಿಗಳ ಮಾರಾಟ ಹಾಗೂ ಸಾಕಾಣೆಗೆ ನಿಷೇಧ

ಹೊಸದಿಲ್ಲಿ: ಪಿಟ್‌ ಬುಲ್‌ ಟೆರಿಯರ್‌, ಅಮೆರಿಕನ್‌ ಬುಲ್‌ ಡಾಗ್‌, ರಾಟ್‌ವೀಲರ್‌ ಮತ್ತು ಮ್ಯಾಸ್ಟಿಫ್ಸ್‌ ಸೇರಿದಂತೆ 23 ತಳಿಯ ನಾಯಿಗಳ ಮಾರಾಟ ಮತ್ತು ಸಾಕಣೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾದ ನಿರ್ದೇಶನದಲ್ಲಿ ಜನರು 23 ತಳಿಗಳ ನಾಯಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದನ್ನು ನಿರ್ಬಂಧಿಸುತ್ತದೆ.

ಈಗಾಗಲೇ ಸಾಕು ಪ್ರಾಣಿಗಳಾಗಿ ಸಾಕಿರುವ ಈ ತಳಿಯ ನಾಯಿಗಳನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿ ಮುಂದೆ ಸಂತಾನಾಭಿವೃದ್ಧಿ ಆಗದಂತೆ ನೋಡಿಕೊಳ್ಳಬೇಕು ಎಂದೂ ಕೇಂದ್ರ ಹೇಳಿದೆ.

ಕೆಲವು ತಳಿಯ ನಾಯಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದನ್ನು ಮತ್ತು ಇತರ ಉದ್ದೇಶಗಳಿಗಾಗಿ ನಿಷೇಧಿಸುವಂತೆ ನಾಗರಿಕರು, ನಾಗರಿಕ ವೇದಿಕೆಗಳು ಮತ್ತು ಪ್ರಾಣಿ ಕಲ್ಯಾಣ ಸಂಸ್ಥೆಗಳಿಂದ ಪ್ರಾತಿನಿಧ್ಯವನ್ನು ಸ್ವೀಕರಿಸಲಾಗಿದೆ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ತಿಳಿಸಿದೆ.

ಸಮಿತಿಯು ಮಿಶ್ರ ಮತ್ತು ಅಡ್ಡ ತಳಿಗಳು ಸೇರಿದಂತೆ 23 ತಳಿಗಳ ನಾಯಿಗಳನ್ನು ಉಗ್ರ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ಎಂದು ಗುರುತಿಸಿದೆ.

ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಬೋರ್‌ಬೋಲ್ ಕಂಗಲ್, ಸೆಂಟ್ರಲ್ ಏಷ್ಯನ್ ಶೆಫರ್ಡ್ ಡಾಗ್ ಮತ್ತು ಕಕೇಶಿಯನ್ ಶೆಫರ್ಡ್ ಡಾಗ್ ಇವುಗಳನ್ನು ನಿಷೇಧಿಸಲು ಕೇಂದ್ರ ಸೂಚಿಸಿದೆ.

ಇತರ ತಳಿಗಳೆಂದರೆ ಸೌತ್ ರಷ್ಯನ್ ಶೆಫರ್ಡ್ ಡಾಗ್, ಟೋರ್ನ್‌ಜಾಕ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ ಮತ್ತು ಅಕಿಟಾ, ಮ್ಯಾಸ್ಟಿಫ್ಸ್, ಟೆರಿಯರ್ಸ್, ರೋಡೇಸಿಯನ್ ರಿಡ್ಜ್‌ಬ್ಯಾಕ್, ವುಲ್ಫ್ ಡಾಗ್ಸ್, ಕೆನಾರಿಯೊ, ಅಕ್ಬಾಶ್ ಡಾಗ್, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ ಮತ್ತು ಬ್ಯಾಂಡೋಗ್.