ಮುದ್ರಾಡಿ ಪ್ರೌಢಶಾಲಾ ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್ ಅವರಿಗೆ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಹೆಬ್ರಿ: ಶಿಕ್ಷಣವೆಂದರೆ ಅರಿವು ಮತ್ತು ಜ್ಞಾನೋದಯದ ಮೂಲಕ ಸಾಗುವ ನಿರಂತರ ಪಯಣ. ಒಬ್ಬ ಶಿಕ್ಷಕನ ಜೀವನವು ಅನೇಕ ದೀಪಗಳನ್ನು ಬೆಳಗಿಸಬಲ್ಲದು. ಶಿಕ್ಷಣವೆಂಬುದು ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗದೆ ಬದುಕು ರೂಪಿಸುವಂತಿರಬೇಕು ಎಂದು ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್ ಹೇಳಿದರು.

ಅವರು ಹೆಬ್ರಿಯ ಚಾಣಕ್ಯ ಎಜುಕೇಶನ್&ಕಲ್ಚರಲ್ ಅಕಾಡೆಮಿ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಕೊಡಮಾಡಿದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಉದ್ಯಮಿ ಬಿ. ಹರ್ಷ ಶೆಟ್ಟಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಚಾಣಕ್ಯ ಸಂಸ್ಥೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗೆ ತರಬೇತಿ ನೀಡುವುದಷ್ಟೇ ಅಲ್ಲದೆ ಈ ಭಾಗದ ಉತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಮೂಡುಬಿದ್ರೆ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಮಾತನಾಡಿ, ಪ್ರಶಸ್ತಿ ಸಮ್ಮಾನಗಳನ್ನು ನಾವು ಅರ್ಜಿ ಹಾಕಿ ಪಡೆಯಬಾರದು. ಪ್ರಶಸ್ತಿಗೆ ಯೋಗ್ಯವಾದ ವ್ಯಕ್ತಿಯನ್ನು ಚಾಣಕ್ಯ ಸಂಸ್ಥೆ ಆಯ್ಕೆ ಮಾಡಿದೆ ಚಂದ್ರಶೇಖರ್ ಭಟ್ಟರು ಕೇವಲ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಷ್ಟೇ ಅಲ್ಲದೆ ಸಂಘಟನೆ ಸಮಾಜ ಸೇವೆ ಸಾಹಿತ್ಯ ಧಾರ್ಮಿಕ ಸೇರಿದಂತೆ ಎಲ್ಲ ವಿಚಾರಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಶಿಕ್ಷಕನಾಗಿ ಜನಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ. ನಾವು ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ ಎನ್ನುವುದಕ್ಕೆ ಚಂದ್ರಶೇಖರ್ ಭಟ್ ಅವರು ಸಾಕ್ಷಿ ಎಂದು ಹೇಳಿದರು

ಲಯನ್ಸ್ ಜಿಲ್ಲಾ ವಕ್ತಾರ ಟಿ.ಜಿ. ಆಚಾರ್ಯ ಸಮ್ಮಾನಿತರ ಬಗ್ಗೆ ಮಾತನಾಡಿ, ಚಂದ್ರಶೇಖರ್ ಭಟ್ ಅವರು ಕ್ರಿಯಾಶೀಲ ಸಂಘಟನಾ ಚತುರ ಮತ್ತು ಉತ್ತಮ ಶಿಕ್ಷಕನಾಗಿ ಗುರುತಿಸಿ ಕೊಂಡಿರುವುದು ನಮ್ಮೆಲ್ಲರ ಹೆಮ್ಮೆ. ಇನ್ನೂ ಅವರಿಂದ ಉತ್ತಮ ಕೆಲಸ ಕಾರ್ಯಗಳು ಮೂಡಿಬರಲಿ, ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿಗಳು ಅವರಿಗೆ ಲಭಿಸಲಿ ಎಂದರು.

ಈ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಸಾಧನೆಗೈದ ಯಶೋಧ ಶೆಟ್ಟಿಯವರನ್ನು ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ವತಿಯಿಂದ ಸಮ್ಮಾನಿಸಲಾಯಿತು.

ಹೆಬ್ರಿ ಚಾಣಕ್ಯ ಚಿತ್ರಕಲಾ ಕೇಂದ್ರದ ನೇತೃತ್ವದಲ್ಲಿ ಗ್ರಾ.ಪಂಚಾಯತ್ ಹೆಬ್ರಿ ,ಉಷಾ ಮೆಡಿಕಲ್ ಹೆಬ್ರಿ,ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಆಶ್ರಯದಲ್ಲಿ ನಡೆದ ಹೆಬ್ರಿ ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗಣೇಶ ಚತುರ್ಥಿ ಅಂಗವಾಗಿ ನಡೆದ ಗಣೇಶ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಹೆಬ್ರಿ ಗ್ರಾ.ಪಂ.ಅಧ್ಯಕ್ಷೆ ಮಾಲತಿ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ರಘುರಾಮ ಶೆಟ್ಟಿ, ಕಾರ್ಯದರ್ಶಿ ರವೀಂದ್ರನಾಥ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಚಾಣಕ್ಯ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಶತ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಂಸ್ಥೆಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಹೆಬ್ರಾಯ್ ಸಂಸ್ಥೆ ಅಧ್ಯಕ್ಷ ದಿನಕರ ಪ್ರಭು ವಂದಿಸಿದರು.