ಕರ್ಗಲ್ಲ್ ಕಾಯಾನಗಾ|
ಬೊಲ್ ಗಲ್ಲ್ ಪೂ ಪೋನಗಾ
ನೆಕ್ಕಿದಡಿಟ್ ಆಟ ಆನಗಾ| ತುಂಬೆದಡಿಟ್ ಕೂಟ ಆನಗಾ
ದೆಂಬೆಲಿಗ್ ಪಾಂಪು ಪಾಡ್ನಗಾ
ಜಾಲ್ ಪಾದೆ ಆನಗಾ
ಅಲೆಟ್ ಬೊಲ್ನೆಯಿ ಮುರ್ಕುನಗಾ
ಉರ್ದು ಮದ್ದೊಲಿ ಆನಗಾ
ಗುರ್ಗುಂಜಿದ ಕಲೆ ಮಾಜಿನಗಾ
ಎರು ದಡ್ಡೆ ಆನಗಾ|
ಗೊಡ್ಡೆರ್ಮೆ ಗೋಣೆ ಆನಗಾ
ಕಲ್ಲ ಕೋರಿ ಕೆಲೆಪುನಗಾ|
ಕಲ್ಲ ಬಸವೆ ಮುಕ್ಕುಡ್ ದಕ್ಕ್ ನಗಾ
ಮಂಜಲ್ ಪಕ್ಕಿ ಮೈಯಿ ಪಾಡ್ನಗಾ
ಕೊಟ್ರುಞ್ಞೆ ಕೊಡಿ ಏರ್ ನಗಾ
ದಂಟೆದಜ್ಜಿ ಮದಿಮಾಲಾನಗಾ
ಆ ಊರ ಪೊಲಿ ಕನಲಾ|
ಈ ಊರಾ ಬಲಿ ಕೊನೊಲಾ
ಬಲ ಬಲೀಂದ್ರ……….. ಕೂ…
ಅರಕ್ ದ ಒಟ್ಟೆ ಓಡೊಡು, ಮಯಣದ ಮೋಂಟು ಜಲ್ಲೊಡು
ಕೊಟ್ಟುಗು ಗೊಂಡೆ ಪೂ ಕಟ್ಟ್ ದ್
ಪೊಟ್ಟು ಗಟ್ಟಿ ಪೊಡಿ ಬಜಿಲ ಬಲಿ ದೆತೊನಿಯೆರೆ
ಬಲ ಬಲೀಂದ್ರಾ…
ಬಲಿಪಾಡ್ಯದಂದು ಈ ರೀತಿ ತುಳುವರು ಬಲೀಂದ್ರನನ್ನು ಕೂಗಿ ಕರೆಯುತ್ತಾರೆ. ಋಷಿ ಕಶ್ಯಪ ಮತ್ತು ದಿತಿಯ ಪುತ್ರರನ್ನು ದೈತ್ಯರೆಂದು ಕರೆಯುವುದು ವಾಡಿಕೆ. ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಸಹೋದರರು ಆದಿ ದೈತ್ಯರು. ಹಿರಣ್ಯಕಶಿಪುವಿನ ಮಗ ಭಕ್ತ ಪ್ರಹ್ಲಾದ. ಆತನ ಮಗ ವೀರೋಚನ. ವೀರೋಚನನ ಮಗ ಬಲಿ. ಬಲಿ ಮೂರೂ ಲೋಕಗಳನ್ನು ಗೆದ್ದ ಚಕ್ರವರ್ತಿ. ಈತನನ್ನು ಬಲಿಚಕ್ರವರ್ತಿ ಎಂದೇ ಕರೆಯಲಾಗುತ್ತದೆ. ಗುರು ಶುಕ್ರಾಚಾರ್ಯರ ಕೃಪೆಯಿಂದ ಇಂದ್ರಪದವಿಗೇರಿದ್ದರಿಂದ ಬಲೀಂದ್ರ ಎಂದು ಕರೆಯುತ್ತಾರೆ. ಹದಿನೆರಡು ಮಹಾಜನ ಮತ್ತು ಸಪ್ತ ಚಿರಂಜೀವಿಗಳಲ್ಲಿ ಬಲಿಯೂ ಒಬ್ಬನು. ದೈತ್ಯನಾದರೂ ಮಹಾ ದಾನಿ. ಭಗವಂತನ ಪಾದಗಳಲ್ಲಿ ತನ್ನನ್ನೇ ತಾನು ಸಮರ್ಪಿಸಿ, ಆತನನ್ನೆ ತನ್ನ ಬಾಗಿಲು ಕಾಯುವಂತೆ ಮಾಡಿದ ಪರಮ ಶ್ರೀವೈಷ್ಣವ. ಪುರಾಣಗಳಲ್ಲಿ ಬರುವ ಕಥೆಗಳು ಕೇವಲ ಕಾಲ್ಪನಿಕವಲ್ಲ. ಖಗೋಳ ಶಾಸ್ತ್ರೀಯ ವಿದ್ಯಮಾನಗಳನ್ನು ಆಧರಿಸಿ ಭೂಮಿಯ ಮೇಲೆ ನಡೆದ ಬದಲಾವಣೆಗಳನ್ನು ಬರೆದಿಟ್ಟ ಈ ನಾಡಿನ ಇತಿಹಾಸ. ಈ ಇತಿಹಾಸದ ಕಥೆಗಳನ್ನು ಖಗೋಳ ವಿಜ್ಞಾನ, ಪುರಾತತ್ವ ಸಂಶೋಧನೆಗಳು, ವಿಜ್ಞಾನದ ಇನ್ನೂ ಹತ್ತು ಹಲವಾರು ಶಾಖೆಗಳ ಜೊತೆ ಸಮೀಕರಿಸಿದಾಗ ಇದು ನಿಜವಾಗಿಯೂ ನಡೆದ ಘಟನೆಗಳು ಎನ್ನುವುದು ವೇದ್ಯವಾಗುತ್ತದೆ. ಚಾಕ್ಷುಷ ಮನ್ವಂತರದ ಅಂತ್ಯ ಮತ್ತು ವೈವಸ್ವತ ಮನ್ವಂತರದ ಆದಿಯಲ್ಲಿ ನಡೆದ ಈ ಘಟನೆಗಳಲ್ಲಿ ವಿಷ್ಣುವು ಕೂರ್ಮ, ಮೋಹಿನಿ, ವಾಮನ ಮತ್ತು ಮತ್ಸ್ಯಾವತಾರಗಳಲ್ಲಿ ಬಂದಿರುತ್ತಾನೆ. ಚಾಕ್ಷುಷದ ಅಂತ್ಯ ಮತ್ತು ವೈವಸ್ವತದ ಆದಿಯಲ್ಲಿ ನಡೆದ ಪ್ರಾಕೃತಿಕ ವಿಪ್ಲವದ ಕಥೆ ಇದರಲ್ಲಡಗಿದೆ. ಇದಕ್ಕೂ ಮುನ್ನ ಬಲಿಯ ಅಜ್ಜ ಮತ್ತು ಮುತ್ತಾತಂದಿರ ಕಥೆಗಳಲ್ಲಿ ವರಾಹ ಮತ್ತು ನರಸಿಂಹ ಅವತಾರದ ಕಥೆ ಬರುತ್ತದೆ. ಭಾರತದ ಇತಿಹಾಸದ ದೃಷ್ಟಿಯಿಂದ ನೋಡುವುದಾದರೆ ಬಲಿ ಒಂದು ಬಹಳ ಮುಖ್ಯವಾದ ಪಾತ್ರ.
ಮಹಾರಾಷ್ಟ್ರ ದಲ್ಲಿ ಬಲಿ ಪಾಡ್ವಾ, ಕರ್ನಾಟಕದಲ್ಲಿ ಬಲಿ ಪಾಡ್ಯಮಿ, ಕೇರಳದ ಓಣಂ, ಹಿಮಾಚಲ ಪ್ರದೇಶದಲ್ಲಿ ಬರ್ ಲಾಜ್(ಬಲಿ ರಾಜ), ಜಮ್ಮುವಿನಲ್ಲಿ ರಾಜಾ ಬಲಿ, ಗುಜರಾತಿನ ಹೊಸ ವರ್ಷವಾದ ಬೆಸ್ತು ವರಸ್, ಮಾರವಾಡಿಗಳ ಹೊಸ ವರ್ಷ… ಹೀಗೆ ಹಲವಾರು ನಾಮಗಳಿಂದ ಕರೆಸಿಕೊಳ್ಳುವ ಬಲಿ ಪಾಡ್ಯ ಹಬ್ಬವು ಒಂದೊಂದೆಡೆ ಒಂದೊಂದು ರೀತಿಯಲ್ಲಿ ಆಚರಿಸಿಕೊಂಡರೂ ಈ ಎಲ್ಲಾ ಪದ್ದತಿಗಳ ಮೂಲ ಬಲಿಪಾಡ್ಯಮಿಯಂದು ಬಲಿ ತನ್ನ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ. ಬಲಿಯ ಸಮುದ್ರ ಮಂಥನದ ಕಥೆಯಲ್ಲಿ ತತ್ವಜ್ಞಾನದ ಅಮೃತವೂ, ಖಗೋಳ ವಿಜ್ಞಾನದ ಘಟನೆಯೂ, ಅದಕ್ಕೆ ಪೂರಕವಾಗಿ ಭೂಮಿಯ ಮೇಲೆ ನಡೆದ ಪ್ರಾಕೃತಿಕ ವಿಪ್ಲವ ಮತ್ತು ರಾಜಕೀಯ ಪಲ್ಲಟಗಳ ದಾಖಲಾತಿಯನ್ನು ಮಾಡಲಾಗಿದೆ. ಚಾಕ್ಷುಷ ಮನ್ವಂತರದ ಕೊನೆ, ವೈವಸ್ವತದ ಆದಿಯಲ್ಲಿ ಪದಚ್ಯುತಿಗೊಂಡ ಬಲಿ ಮುಂದೆ ಸಾವರ್ಣಿ ಮನ್ವಂತರದಲ್ಲಿ ಮತ್ತೆ ಇಂದ್ರ ಪದವಿಯನ್ನೇರಲಿದ್ದಾನೆ ಎನ್ನುವುದನ್ನು ಇಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಬಲಿಹಿಃ ಎಂದರೆ ‘ಭಗವಂತನನ್ನು ಭಕ್ತಿಯಿಂದ ಒಲಿಸಿಕೊಂಡವನು’ ಎಂದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಹೇಳುತ್ತಾರೆ.
ಶ್ರೀಮನ್ನಾರಾಯಣನು ವಾಮನ ರೂಪದಲ್ಲಿ ಬಂದು ಬಲಿಯನ್ನು ಮೂರು ಹೆಜ್ಜೆ ದಾನ ಕೇಳಿದ್ದು, ಬಲಿ ಅಹಂಕಾರದಿಂದ ಆತನನ್ನು ಅಪಹಾಸ್ಯ ಮಾಡಿದ್ದು, ವಾಮನ ತ್ರಿವಿಕ್ರಮನಾಗಿ ಮೂರ್ಜಗವನ್ನೆ ಅಳೆದದ್ದು, ಬಲಿಯನ್ನು ಪಾತಾಳಕ್ಕೆ ಹೋಗಿ ನೆಲೆಸುವಂತೆ ಹೇಳಿದ್ದು, ಈ ಕಥೆ ಎಲ್ಲರಿಗೂ ಗೊತ್ತಿರುವಂತಹುದೆ. ಹೀಗೆ ಭಾರತದಿಂದ ಹೊರದಬ್ಬಿಸಿಕೊಂಡ ಬಲಿ ಎಲ್ಲಿ ಹೋದ? ಈ ಬಗ್ಗೆ ಬಹುಶ್ರುತ ವಿದ್ವಾಂಸರಾದ ಡಾ.ಕೆ.ಎಸ್.ನಾರಾಯಣಾಚಾರ್ಯರು ಹೀಗೆ ಬರೆಯುತ್ತಾರೆ-“ಬಲಿ ಚಕ್ರವರ್ತಿಯನ್ನು ಇಲ್ಲಿಂದ ಹೊರ ದಬ್ಬಿದಾಗ ಅವನ ಕಡೆಯವರು ‘ಓಣಂ’, ಅಂದರೆ ‘ವಾಮನ ಜಯಂತಿ’ಯಂದು ಸಾವಿರಾರು ದೋಣಿಗಳಲ್ಲಿ ವಲಸೆ ಹೋಗಿ ಆಗಿನ ಪಾತಾಳ, ಈಗಿನ ಅಮೇರಿಕಾದಲ್ಲಿ ನೆಲೆಸಿದರು. ಕೇರಳ, ಕಳಾವಳಿಯ ಮೂಲಕ ಬಲಿಯ ಕಡೆಯವರು ಈಗಿನ ಜಾವಾ, ಸುಮಾತ್ರಾ, ಬೋರ್ನಿಯೋ, ಪೂರ್ವ ಸಮುದ್ರ- ಶಾಂತ ಸಾಗರದ ಹಾದಿಯಲ್ಲಿ ಅಮೇರಿಕಾ ಸೇರಿದ ನೆನಪನ್ನು ಇಂದಿಗೂ ಕೇರಳೀಯರು ಓಣಂ (ಶ್ರಾವಣ ಮಾಸ ಶ್ರವಣ ನಕ್ಷತ್ರ ವಾಮನ ಹುಟ್ಟಿದ ದಿನ) ಎಂಬ ದೋಣಿ ಸ್ಪರ್ಧೆಯ ನೆನಪಿನಲ್ಲಿ ಆಚರಿಸುತ್ತಾರೆ’. ದಕ್ಷಿಣ ಅಮೇರಿಕಾದ ಪೆರು ಮತ್ತು ಬಲಿವಿಯಾಗಳಲ್ಲಿ ಬಲಿಯ ಮಗ ವೀರೋಚನನನ್ನು ಈಗಲೂ ‘ವೀರಕೋಚ’ ಎಂದು ನೆನಪಿಸಿಕೊಳ್ಳುತ್ತಾರೆ”.
ತುಳುನಾಡಿನಲ್ಲಿ ಬಲಿಪಾಡ್ಯಮಿಯನ್ನು ತುಡರ ಪರ್ಬ ಎಂದೂ ಕರೆಯುತ್ತಾರೆ. ಅಂದು ತಮ್ಮ ಮನೆ, ಹಟ್ಟಿ, ಕೃಷಿ ಗದ್ದೆಗಳಲ್ಲಿ ಹಣತೆ ಹಚ್ಚುವ ಮೂಲಕ ತುಡರ ಪರ್ಬವನ್ನು ಆಚರಿಸಲಾಗುತ್ತದೆ. ಮನೆಯಲ್ಲಿರುವ ಗೋವುಗಳಿಗೆ ಗೊಂಡೆ ಹೂವಿನ ಮಾಲೆ ಹಾಕಿ ಸಿಂಗರಿಸಿ, ಬಗೆ ಬಗೆಯ ಮರದ ಎಲೆಗಳಿಂದ ತಯಾರಿಸಲಾದ ಗಟ್ಟಿ ನೀಡಲಾಗುತ್ತದೆ. ಬಲಿಪಾಡ್ಯಮಿಯ ಮೂರು ದಿನಗಳಂದೂ ಕುಟುಂಬಿಕರೆಲ್ಲಾ ಒಟ್ಟಾಗಿ ಸಂಭ್ರಮದಿಂದ ಬಲಿಪಾಡ್ಯಮಿಯನ್ನು ಆಚರಿಸುತ್ತಾರೆ.
ವರ್ಷಪೂರ್ತಿ ಸಿಹಿತಿಂಡಿ ಮತ್ತು ಸುಡುಮದ್ದಿಗಾಗಿ ಕಾಯುವ ಚಿಣ್ಣರು ರಂಗಿನ ಬಟ್ಟೆ ತೊಟ್ಟು ಕಲರವ ಮಾಡುತ್ತಾ ಅತ್ತಿಂದಿತ್ತ ಓಡಾಡುವುದನ್ನು ನೋಡುವುದೇ ಒಂದು ಖುಷಿ. ಬಲಿಪಾಡ್ಯಮಿ ಅಂದರೆ ಸುಖ ಸಂಪತ್ತು ಧನ ಧಾನ್ಯವನ್ನು ತರುವ ಹಬ್ಬ. ಭಗವದ್ಭಕ್ತಿಯನ್ನು ಹೆಚ್ಚಿಸುವ ಹಬ್ಬ. ಹಲವಾರು ಶತಮಾನಗಳಿಂದಲೂ ಬಲಿಪಾಡ್ಯಮಿಯ ಆಚರಣೆಯು ಎಳ್ಳಷ್ಟೂ ಮಸುಕದೆ ನಡೆಯುತ್ತಾ ಬಂದಿರುವುದು ಭಾರತೀಯ ಪರಂಪರೆಯ ಬೇರುಗಳ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.