ಉದಯಪುರ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಬಜರಂಗದಳ; ಹಿಂಜಾವೇ ಬೃಹತ್ ಪ್ರತಿಭಟನೆ

ಉಡುಪಿ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ, ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿತು. ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಸುಮಾರು ಎರಡು ಕಿಲೋಮೀಟರ್‌ ದೂರದವರೆಗೆ ನೂರಾರು ಹಿಂದೂ ಕಾರ್ಯಕರ್ತರು ಘಟನೆಯ ವಿರುದ್ಧ ಧಿಕ್ಕಾರ ಕೂಗುತ್ತಾ ಸಾಗಿದರು. ಈ ಸಂದರ್ಭ ಹಿಂದೂ ಜಾಗರಣ ವೇದಿಕೆ ಮುಖಂಡರು ಮದರಾಸಗಳ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ದೇಶೀಯ ಭಯೋತ್ಪಾದನೆಗೆ ಮದರಸಾಗಳೇ ಕಾರಣ. ದೇಶಾದ್ಯಂತ ಮದರಸಗಳಿಗೆ ಲಗಾಮು ಹಾಕಿದರೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್‍ರಂತಹ ದುಷ್ಕೃತ್ಯಗಳನ್ನು ತಡೆಯಬಹುದು. ಮದರಸಗಳು ಮುಸ್ಲಿಂ ಭಯೋತ್ಪಾದನೆ ಸೃಷ್ಟಿಸುವ ಕೇಂದ್ರವಾಗಿ ಪರಿವರ್ತನೆಯಾಗಿದೆ ಎಂದು ಕಿಡಿ ಕಾರಿದ್ದಾರೆ.

ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಮಾತನಾಡಿ, ಇಸ್ಲಾಂನ ಭಯೋತ್ಪಾದನೆ ಮತ್ತು ಕ್ರೌರ್ಯ ಮಿತಿಮೀರಿದ ಹಿನ್ನೆಲೆಯಲ್ಲಿ ನಡೆದ ಘಟನೆ ಇದು. ಹಿಂದೂ ಜಾಗರಣ ವೇದಿಕೆ ಇದನ್ನು ಖಂಡಿಸುತ್ತದೆ. ದೇಶಾದ್ಯಂತ ಮದರಸಗಳಿಗೆ ಲಗಾಮು ಹಾಕಿದರೆ ಇಂತಹ ದುಷ್ಕೃತ್ಯಗಳನ್ನು ತಡೆಯಬಹುದು. ಮದರಸಗಳು ಮುಸ್ಲಿಂ ಭಯೋತ್ಪಾದನೆ ಸೃಷ್ಟಿಸುವ ಕೇಂದ್ರವಾಗಿ ಪರಿವರ್ತನೆಯಾಗಿದೆ. ಆ ಬಗ್ಗೆ ನಿಗಾವಹಿಸಬೇಕು. ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ, ಸಮಾಜದಲ್ಲಿ ಅನ್ಯಾಯ ಅಹಿತಕರ ಘಟನೆಗಳನ್ನು ಮತ್ತು ಈ ಭಯೋತ್ಪಾದನಾ ಕೃತ್ಯವನ್ನು ತಡೆಗಟ್ಟಿ. ಸಾಧ್ಯವಾಗದಿದ್ದರೆ ಹಿಂದೂ ಸಮಾಜ ಇಂತಹ ದುಷ್ಟರನ್ನು ಮಟ್ಟಹಾಕುತ್ತದೆ.

ಆರೋಪಿಗಳ ಬಂಧನವಾಗಿದ್ದರೂ, ಆರೋಪಿಗಳು ಎಲ್ಲದಕ್ಕೂ ಕೂಡ ಸಿದ್ಧತೆ ಮಾಡಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಒಂದು ಕೊಲೆಯನ್ನು ಮೊಬೈಲ್ ಶೂಟಿಂಗ್ ಮಾಡಿ ಹಂಚುವ ತನಕ ಮನಸ್ಥಿತಿ ಬಂದಿದೆ ಎಂದರೆ ಇದು ಭಯೋತ್ಪಾದನೆ ಹೊರತು ಮತ್ತೇನು ಅಲ್ಲ ಎಂದರು.

ಮಣಿಪಾಲದ ಡಿಸಿ ಕಚೇರಿ ಮುಂಭಾಗದಲ್ಲಿ ಬಜರಂಗದಳ ಹಾಗೂ ವಿಹಿಂಪ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು‌. ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ನಡೆಸಿದವರನ್ನು ಕೂಡಲೇ ಗಲ್ಲಿಗೇರಿಸಬೇಕು ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು‌.