ಬೈಂದೂರು: ಹೇರಂಜಾಲು ಗುಡೇದೇವಸ್ಥಾನದ ಏತ ನೀರಾವರಿ ಜಾಕ್‌ವೆಲ್ ಸ್ಥಳಾಂತರ ಆಗ್ರಹಿಸಿ ಧರಣಿ

ಉಡುಪಿ: ಗುಡೇದೇವಸ್ಥಾನ ಏತ ನೀರಾವರಿ ಯೋಜನೆಯನ್ನು ಹಳಗೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನಾನುಕೂಲವಾಗುವಂತೆ ಮಾರ್ಪಡಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಜಾಕವೆಲ್ ನ್ನು ಸ್ಥಳಾಂತರಿಸಿ ಕಾಮಗಾರಿ ನಡೆಸುವ ಮೂಲಕ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀ ಗುಡೇದೇವಸ್ಥಾನ ಏತ ನೀರಾವರಿ ಸಂತ್ರಸ್ತರ ರೈತರ ಒಕ್ಕೂಟ ನೇತೃತ್ವದಲ್ಲಿ ಹೇರಂಜಾಲು, ಹಳಗೇರಿ ಹಾಗೂ ನೂಜಾಡಿ ಗ್ರಾಮಸ್ಥರು ಬೈಂದೂರು ತಾಲೂಕು ಕಚೇರಿ ಮುಂಭಾಗದಲ್ಲಿ ಶುಕ್ರವಾರ ಧರಣಿ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಹೇರಂಜಾಲು, ಹಳಗೇರಿ ಹಾಗೂ ನೂಜಾಡಿ ಗ್ರಾಮದ ರೈತರು, ಗ್ರಾಮಸ್ಥರು ಅಸಮರ್ಪಕ ಏತ ನೀರಾವರಿ ಕಾಮಗಾರಿಯ ವಿರುದ್ಧ ಆಕ್ರೋಶ ಹೊರಹಾಕಿದರು. ಯೋಜನೆಯನ್ನು‌ ಬದಲಿಸಿ ರೈತರಿಗೆ ಸಂಕಷ್ಟ ತಂದೊಡ್ಡಿದ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಜಾಕವೆಲ್ ನ್ನು ಕೂಡಲೇ ಸ್ಥಳಾಂತರಿಸಿ ರೈತರಿಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಬೇಕು ಎಂದು ಧರಣಿ ನಿರತ ರೈತರು ಒತ್ತಾಯಿಸಿದರು.

ಧರಣಿ ಉದ್ದೇಶಿಸಿ ಮಾತನಾಡಿದ ಜಿಲ್ಲಾ ರೈತ ಸಂಘ ಖಂಬದಕೋಣೆ ವಲಯ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರು, ಏತ ನೀರಾವರಿ ಯೋಜನೆಯ ಯಾವುದೇ ವೆಂಟೆಂಡ್ ಡ್ಯಾಮ್‌ಗಳು ರೈತರಿಗೆ ಅನುಕೂಲಕರವಾಗಿಲ್ಲ. ಅಲ್ಲದೆ, ಉದ್ದೇಶಿತ ಯೋಜನೆ ಕೂಡ ಸಾಕಾರಗೊಂಡಿಲ್ಲ. ಈ ಯೋಜನೆಯಿಂದ ಸಾವಿರಾರು ರೈತರಿಗೆ ಅನ್ಯಾಯವಾದರೆ ಅದಕ್ಕೆ ಅಧಿಕಾರಿಗಳೆ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೈಂದೂರು ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಡೆಯುತ್ತಿರುವ ಬಹುತೇಕ ವೆಂಟೆಂಡ್‌ ಡ್ಯಾಮ್‌ಗಳು ಗುತ್ತಿಗೆದಾರರ ಹಿತಾಶಕ್ತಿಗೆ ಅನುಗುಣವಾಗಿ ನಡೆಯುತ್ತಿದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಗುಡೇ ಮಹಾಲಿಂಗೇಶ್ವರದಲ್ಲಿ 72 ಕೋಟಿ ರೂಪಾಯಿ ಅನುದಾನದಲ್ಲಿ ಏತ ನೀರಾವರಿ ಯೋಜನೆ ನಡೆಯುತ್ತಿದ್ದು, 3 ಕಿ.ಮೀ ದಂಡೆ ಹಾಕಿರುವ ಪರಿಣಾಮ ಈ ಭಾಗದ ಸಾವಿರಾರು ಎಕರೆ ನೆಲಗಡಲೆ ಕೃಷಿಗೆ ಹಾನಿಯಾಗಿವೆ. ಇದರಿಂದ ರೈತರ ಬದುಕು ಸಂಕಷ್ಟಕ್ಕೀಡಾಗಿದೆ. 56 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ವೆಂಟೆಂಡ್ ಡ್ಯಾಮ್‌ನಿಂದ ವ್ಯರ್ಥವಾಗಿದ್ದು, ಸರಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ಇವುಗಳನ್ನು ವಿರೋಧಿಸಿದರು ದಬ್ಬಾಳಿಕೆ ನಡೆಸುತ್ತಾರೆ. ಆದರೆ ಬೈಂದೂರನ್ನು ಬಳ್ಳಾರಿಯಾಗಲು ಬಿಡುವುದಿಲ್ಲ ಎಂದು ಅವರು ಗುಡುಗಿದರು.
ಪ್ರತಿಭಟನೆಗೂ ಮುನ್ನ ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಬೈಂದೂರು ಆಡಳಿತ ಸೌಧದ ವರೆಗೆ ಕಾಲ್ನಡಿಗೆ ಜಾಥ ನಡೆಸಲಾಯಿತು. ಧರಣಿ ಬಳಿಕ ಬೈಂದೂರು ತಹಶೀಲ್ದಾರ್ ಭೀಮಸೇನ ಕುಲಕರ್ಣಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾ‌ರ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷೆ ಜಯಂತಿ ಐತಾಳ್, ಜಿಲ್ಲಾ ರೈತ ಸಂಘದ ಪ್ರತಿನಿಧಿ ಉದಯ ಕುಮಾರ್ ಶೆಟ್ಟಿ,ರಾಘವೇಂದ್ರ ಹೇರಂಜಾಲು,ವೇದನಾಥ ಹೇರಂಜಾಲು,ಕೃಷ್ಣ ಪೂಜಾರಿ,ಮಣಿರಾಜ್ ಹೇರಂಜಾಲು,ಕೃಷ್ಣ ಶುಕ್ರಾಸನಮನೆ,ಸುಬ್ರಹ್ಮಣ್ಯ, ರೈತ ಮುಖಂಡರು‌ ಉಪಸ್ಥಿತರಿದ್ದರು.