ಬೈಂದೂರು: ಕ್ಷೇತ್ರದ ಜನರೊಂದಿಗೆ ಇರುವ ನಾಯಕರನ್ನು ಮತದಾರರು ಗೆಲ್ಲಿಸಬೇಕಾಗಿದೆ. ಸಂವಿಧಾನ ಬದಲಾಯಿಸಲು ಹೊರಟವರನ್ನು ವಿರೋಧಿಸಬೇಕಿದೆ. ಸಂವಿಧಾನವಿಲ್ಲದಿದ್ದರೆ ನಾವು ಬದುಕಲು ಸಾಧ್ಯವಿಲ್ಲ. ಸುಳ್ಳಿನ ಮೇಲೆ ಬಿಜೆಪಿ ರಾಜಕಾರಣ ಮಾಡುತ್ತಿದೆ. ದೇಶದಲ್ಲಿ ಬಡವರು, ಸಾಮಾನ್ಯರು ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಪಂಚ ಗ್ಯಾರೆಂಟಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜನಪರವಾಗಿದೆ ಎಂದು ರಾಜ್ಯ ಬಂದರು, ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಹೇಳಿದ್ದಾರೆ.
’ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ’ ಘೋಷಣೆಯೊಂದಿಗೆ ’ಗಾಂಧಿ ಭಾರತ’ ಕಾರ್ಯಕ್ರಮದ ಅಂಗವಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಮತ್ತು ಬೈಂದೂರು ಬ್ಲಾಕ್ ಕಾಂಗ್ರೆಸ್ ನೇತೃತ್ವ ದಲ್ಲಿ ಮಂಗಳವಾರ ಬೈಂದೂರು ಯಡ್ತರೆ ಜೆ.ಎನ್.ಆರ್ ಸಭಾಭವನದಲ್ಲಿ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ವಿರುದ್ಧ ನಡೆದ ಜನಾಕ್ರೋಷ ಹಾಗೂ ಪ್ರತಿಭಟನೆಯ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿಲ್ಲ. ಕರಾವಳಿಯಲ್ಲಿ ಬಿಜೆಪಿ ಪಕ್ಷ ಹಿಂದುತ್ವದ ನೆಲೆಯಲ್ಲಿ ರಾಜಕಾರಣ ಮಾಡುತ್ತಿದೆ. ಕೆಲಸವನ್ನು ಮಾಡದೆ ಸುಳ್ಳು ಹೇಳುವ ಮನಸ್ಥಿತಿ ಬಿಜೆಪಿಗರದ್ದು. ಮೀನುಗಾರರ ಸೀಮೆಎಣ್ಣೆ, ಡಿಸೆಲ್ ಸಬ್ಸಿಡಿ, ಮೀನುಗಾರಿಕಾ ಮನೆ ಸಮಸ್ಯೆ ಬಗೆಹರಿಸಿದ್ದು ಕಾಂಗ್ರೆಸ್ ಪಕ್ಷ. ರಾಜ್ಯದಲ್ಲಿ ರಸ್ತೆ, ಸೇತುವೆ ಸಹಿತ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಕಾಂಗ್ರೆಸ್ ಸರಕಾರದಿಂದ ನಡೆಯುತ್ತಿದೆ ಎಂದರು.
ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕರಾವಳಿಯಲ್ಲಿ ಮೀನುಗಾರರಿಗೆ ಪ್ರಯೋಜನ ವಾಗುವ ಗಂಗೊಳ್ಳಿ ಬ್ರೇಕ್ ವಾಟರ್, ಕೊಡೇರಿ ಪ್ರಾಜೆಕ್ಟ್ ಆರಂಭಿಸಿದ್ದು ಕಾಂಗ್ರೆಸ್. ಬಿಜೆಪಿಯವರು ಹೇಳುವ ಸುಳ್ಳು ಸಂಗತಿಗಳನ್ನು ಜನರಿಗೆ ಅರ್ಥೈಸಬೇಕಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುವರನ್ನು ಗುರುತಿಸಬೇಕು. ವೈಭವೀಕರಣ ಬೇಡ. ನಮ್ಮ ಮನೆಯ ಮಕ್ಕಳನ್ನು ಮೊದಲು ಜಾಗೃತಿ ಮಾಡಬೇಕು. ಬಡವರ ಮಕ್ಕಳನ್ನು ಮುಂದಕ್ಕೆ ತಳ್ಳುವ ಪ್ರವೃತ್ತಿಯಿಂದ ದೂರವಿರಬೇಕು. ಜನರು ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಕಾಂಗ್ರೆಸ್ ಸರಕಾರದ ಗ್ಯಾರೆಂಟಿ ಯೋಜನೆ ಗಳನ್ನು ಸುಳ್ಳು ಎಂದು ಬಿಂಬಿಸಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿ ದರು. ಕಾಂಗ್ರೆಸ್ ಮಾಡಿದ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮರೆ ಮಾಚಿದರು. ಕೇಂದ್ರದಲ್ಲಿ ೧೦ ವರ್ಷದಿಂದ ಆಡಳಿತದಲ್ಲಿರುವ ಬಿಜೆಪಿ ಸರಕಾರವು ವಚನ ಭ್ರಷ್ಟವಾಗಿದೆ. ಉದ್ಯೋಗ ಸೃಷ್ಟಿಯಿಲ್ಲದೆ ಜನ ವಲಸೆ ಹೋಗುವಂತಾಗಿದೆ. ಅವರ ಕೆಲವು ನೀತಿಯಿಂದಾಗಿ ಸಣ್ಣ ಕೈಗಾರಿಕೆಗಳು ಮುಚ್ಚಿದೆ. ರೈತರು ಕಂಗಾಲಾಗಿದ್ದಾರೆ ಎಂದು ಆರೋಪಿಸಿದರು.
ಅಡುಗೆ ಅನಿಲ, ಇಂಧನ ದರ ಹೆಚ್ಚಿದೆ. ಮೋದಿ ಸರಕಾರದ ಬೆಲೆ ಏರಿಕೆಗೂ ಕಾಂಗ್ರೆಸ್ ಸರಕಾರದ ಜನಪರ ಯೋಜನೆಯನ್ನು ಜನರು ತುಲನೆ ಮಾಡಬೇಕಿದೆ. ಚಿನ್ನ, ಬೆಳ್ಳಿ, ಕಬ್ಬಿಣ, ಸಿಮೆಂಟ್ ಸಹಿತ ರಸಗೊಬ್ಬರದ ಬೆಲೆ ಏರಿಸಲಾಗಿದೆ. ಮತದಾರರು ಪ್ರಜ್ಞಾವಂತರಾಗಿ ಕರಾವಳಿ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವಂತಾಗಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಉದ್ಘಾಟಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ವಿನಯ ಕುಮಾರ್ ಸೊರಕೆ, ಪ್ರಸಾದ್ರಾಜ್ ಕಾಂಚನ್, ರಮೇಶ್ ಕಾಂಚನ್, ಎಸ್.ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಅರವಿಂದ ಪೂಜಾರಿ, ದಿನೇಶ್, ಕೃಷ್ಣಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ನಿರೂಪಿಸಿದರು. ಈ ಮೊದಲು ಬೈಂದೂರು ಗಾಂಧಿ ಮೈದಾನದಿಂದ ಮೆರವಣಿಗೆ ನಡೆಯಿತು.












