ಪುಟ್ಟ ಊರಲ್ಲಿರುವ ಜನಸಾಮಾನ್ಯನೊಬ್ಬ ಮಾಡುವ ಸಮಾಜ ಸೇವೆಯನ್ನು ಕೆಲವೊಮ್ಮೆ ಯಾವ ಸರಕಾರವೂ ಮಾಡುವುದಿಲ್ಲ. ನಾವು ಸಮಾಜ ಸೇವಕರು ಎಂದು ಹಣೆಪಟ್ಟಿ ಹೊತ್ತುಕೊಂಡವರೂ ಮಾಡುವುದಿಲ್ಲ. ಕಮ್ಮಾರಿಕೆ ವೃತ್ತಿ ಮಾಡುತ್ತಿರುವ ವ್ಯಕ್ತಿಯೊಬ್ಬರು ತನ್ನೂರಿನ ರಸ್ತೆಯನ್ನು ತಾನೇ ನಿಂತು ರಿಪೇರಿ ಮಾಡಿ ಇದೀಗ ಸುದ್ದಿಯಾಗಿದ್ದಾರೆ.
ಹೆಸರು ದಾಮೊದರ್ ಆಚಾರ್ಯ. ಮೂಲತಃ ಕಮ್ಮಾರಿಕೆ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಇವರು ಕಾರ್ಕಳ ತಾಲೂಕಿನ ಕಾಂತರಗೋಳಿ ಎರ್ಲಪಾಡಿ ನಿವಾಸಿ. ತನ್ನೂರಿನ ರಸ್ತೆ ಹೊಂಡಾ ಗುಂಡಿಗಳಿಂದ ಕೂಡಿದ್ದನ್ನು ಕಂಡು ನೊಂದ ಇವರು ಪಂಚಾಯತ್ ರಸ್ತೆ ಸರಿಮಾಡದ್ದನ್ನು ಕಂಡು ರೋಸಿಹೋಗಿ ತಾವೇ ಸ್ವತಃ ರಸ್ತೆ ರಿಪೇರಿ ಮಾಡಬೇಕೆಂದು ಪಣ ತೊಟ್ಟರು.
ಕಿತ್ತು ಹೋದ ಡಾಂಬರು ಹೊತ್ತು ತಂದರು:
ಬೈಲೂರಿನಲ್ಲಿ ರಸ್ತೆ ಅಗಲೀಕರಣಗೊಳ್ಳುವ ನಿಮಿತ್ತ ಜೆಸಿಬಿ ಯಂತ್ರಗಳ ಮೂಲಕ ಹಳೆಯ ರಸ್ತೆಯ ಡಾಂಬರು ಕಿತ್ತು ತೆಗೆಯಲಾಗಿತ್ತು. ಅಲ್ಲಿ ಡಾಂಬರು ಹಾಳಾಗಿ ಬಿದ್ದಿರುವುದನ್ನು ಕಂಡ ದಾಮೋದರ್ ಅವರು
ಅದನ್ನು ಸಂಗ್ರಹಿಸಿ, ಜೊತೆಗೆ ಜಲ್ಲಿ ಕಲ್ಲುಗಳನ್ನು ಹೆಕ್ಕಿ ಕರಿಕಲ್ಲುಗಳನ್ನ ಒಂದುಗೂಡಿಸಿ ಮಣ್ಣನ್ನು ತನ್ನ ಪಿಕ್ ಅಪ್ ವಾಹನಲ್ಲಿ ತಂದು, ತನ್ನೂರಿನ ರಸ್ತೆಯ ಹೊಂಡಗಳನ್ನು ಮುಚ್ಚಿ ರಸ್ತೆ ಮಾಡಿ ಸಾಮಾಜಿಕ ಕಾರ್ಯವೆಸೆಗಿದ್ದಾರೆ.
ರಾತ್ರಿ ತನ್ನ ಕಮ್ಮಾರಿಕೆ ಕೆಲಸ ಮುಗಿದ ನಂತರವೂ ರಸ್ತೆ ಕೆಲಸದಲ್ಲಿ ನಿರತರಾದ ಇವರಿಗೆ ಪತ್ನಿ ಪುಷ್ಪಾವತಿ ಕೂಡ ಬೆನ್ನೆಲಾಗಿ ನಿಂತು, ರಸ್ತೆ ನಿರ್ಮಾಣದ ಕೆಲಸಕ್ಕೆ ಸಾಥ್ ಕೊಟ್ಟಿದ್ದಾರೆ. ಇದೀಗ ಈ ರಸ್ತೆ ದಾಮೋದರ್ ಅವರ ಕೆಲಸದಿಂದ ಸಂಚಾರಕ್ಕೆಯೋಗ್ಯವಾಗಿದೆ.
ಈ ರಸ್ತೆಯಲ್ಲಿ ಶಾಲೆ ಕಾಲೇಜಿಗೆ ತೆರಳುವ ಮಕ್ಕಳು ಸುಮಾರು ಏಳು ಕಿ.ಮಿ ಕ್ರಮಿಸಬೇಕಿತ್ತು. ಹೊಂಡಗುಂಡಿಗಳಿಂದ ತುಂಬಿರುವ ಈ ರಸ್ತೆ ಸಂಚಾರಕ್ಕೆ ಅನನುಕುಲವಾಗಿ ಪರಿಣಮಿಸಿತ್ತು. ಕಾಂತರಗೋಳಿ ಪಂಚಾಯತ್ ಈ ರಸ್ತೆ ರಿಪೇರಿಯ ಬಗ್ಗೆ ತಲೆಕೆಡಿಸಿ ಕೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ವ್ಯಕ್ತವಾಗಿತ್ತು. ಇದೀಗ ದಾಮೋದರ್ ದಂಪತಿ ಪಂಚಾಯತ್ ಗೆ ಕಾಯದೇ ರಸ್ತೆ ಕೆಲಸ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಈ ದಂಪತಿ ಸುಮಾರು ಮೂರು ವರ್ಷಗಳಿಂದ ಇದೇ ರೀತಿ ರಸ್ತೆ ರಿಪೇರಿ ಕೆಲಸವನ್ನು ಮಾಡುತ್ತಲೇ ಇದ್ದರೂ ಪಂಚಾಯತ್ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡದೆ ಮೌನದಿಂದ ಕುಳಿತಿದೆ.
ಇದೀಗ ದಾಮೊದರ್ ಆಚಾರ್ಯ ದಂಪತಿ ಸುಮಾರು ಮೂರು ಕಿ.ಮಿ ರಸ್ತೆ ಯನ್ನು ಸರಿಮಾಡುವ ಉದ್ದೇಶ ಹೊಂದಿದ್ದು ಇವರ ಸಮಾಜ ಸೇವೆ ಕಂಡು ಪಂಚಾಯತ್ ಕೂಡ ನಾಚಬೇಕಾಗಿದೆ ಹಾಗೂ ನಿದ್ದೆಯಿಂದ ಇನ್ನಾದರೂ ಎದ್ದೇಳಬೇಕಾಗಿದೆ.
ಚಿತ್ರ-ವರದಿ:ರಾಂ ಅಜೆಕಾರ್












