ಬಘೀರಾ, ಸಲಾರ್, ಎನ್ಟಿಆರ್31, ಕೆಜಿಎಫ್ 3….. ಅಬ್ಬಬ್ಬಾ… ಕೆ.ಜಿ.ಎಫ್ ತಂಡದಿಂದ ಸಾಲು ಸಾಲು ಸಿನಿಮಾ… ಸಿನಿ ಪ್ರೇಮಿಗಳಿಗೆ ಹಬ್ಬವೋ ಹಬ್ಬ….

ಬೆಂಗಳೂರು: ಕೆಜಿಎಫ್ ನಿರ್ಮಾಪಕರ ತಂಡದಿಂದ ಶ್ರೀಮುರಳಿ ಅಭಿನಯದ ಮತ್ತೊಂದು ಅದ್ದೂರಿ ಚಿತ್ರ “ಬಘೀರ”ಗೆ ಚಾಲನೆ ದೊರೆತಿದೆ. ಇದರ ಬೆನ್ನಲ್ಲೇ ಕೆಜಿಎಫ್ ಚಾಪ್ಟರ್ 2ರ ಉತ್ತರಭಾಗ ಕೆಜಿಎಫ್ 3 ತೆರೆ ಮೇಲೆ ಮೂಡಿ ಬರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ. ಕೆಜಿಎಫ್ ಸಿನಿಮಾಗಳಿಗೆ ನಿರ್ದೇಶಕರಾಗಿರುವ ಪ್ರಶಾಂತ್ ನೀಲ್ ತಮ್ಮ ಮುಂದಿನ ಪ್ರಾಜೆಕ್ಟ್, ಪ್ರಭಾಸ್ ನಾಯಕ ನಟನಾಗಿರುವ ಸಲಾರ್ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದಾದ ಬಳಿಕ ಕೆ.ಜಿ.ಎಫ್- 3 ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ. ಇದರ ಜೊತೆಗೆ ಶುಕ್ರವಾರ, ಮೇ 20 ರಂದು ಎನ್‌ಟಿಆರ್ ಹುಟ್ಟುಹಬ್ಬದ ಸಂದರ್ಭದಲ್ಲಿ, ಎನ್‌ಟಿಆರ್ 31 ರ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಲಾಗಿದೆ. ಈ ಚಿತ್ರವನ್ನು ಕೂಡಾ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ.

ವಿಜಯ್ ಕಿರಗಂದೂರ್ ನಿರ್ಮಾಪಕರಾಗಿರುವ ಈ ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ವಿಶ್ವದಾದ್ಯಂತ ಧೂಳೆಬ್ಬಿಸಿ ಕನ್ನಡ ಚಿತ್ರರಂಗದೆಡೆ ತಿರುಗಿ ನೋಡುವಂತೆ ಮಾಡಿದ ಕೆ.ಜಿ.ಎಫ್ ತಂಡದಿಂದ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಸಿನಿ ಪ್ರೇಮಿಗಳಲ್ಲಿ ಹಬ್ಬದ ವಾತಾವರಣವನ್ನುಂಟು ಮಾಡಿದೆ.